ಎಮ್ಮ ಚೆಲುವ ಕರುನಾಡು:ಒಂಥರಾ ಮಂಥನ ಶಿಬಿರವು
ಹೃಷಿಕೇಶ್ ಬಹದ್ದೂರ್ ದೇಸಾಯಿ
ಸೋಮವಾರ, 15 ನವೆಂಬರ್ 2010 (05:18 IST)
(ಚಿತ್ರಗಳು:ಪ್ರಕಾಶ್ ಬಾಬು)
ಅವತ್ತು ನಮ್ಮೂರು ಹಾನಗಲ್ಲಿನಲ್ಲಿ `ಕರ್ನಾಟಕ ಕುಲಪುತ್ರ ಗೂಳಿಹಟ್ಟಿ ಶೇಖರ್ ಫ್ಯಾನ್ ಕ್ಲಬ್’ ಉದ್ಘಾಟನೆ. ನಾನು ಹಾಗು ನಮ್ಮ ಗೆಳೆಯರು ತುಂಬ ಗಡಿಬಿಡಿಯಲ್ಲಿ ಓಡಾಡಿಕೊಂಡು ಇದ್ದೆವು.
ಕಾರ್ಯಕ್ರಮವನ್ನು ತುಂಬ ಡಿಫೆರೆಂಟ್ ಆಗಿ ಮಾಡಬೇಕು ಎಂದುಕೊಂಡಿದ್ದರಿಂದ ನಮಗೆ ತುಂಬ ಕೆಲಸಗಳು. `ಬರೀ ಭಾಷಣ ಬೇಡ, ಏನಾದರೂ ಪ್ರ್ಯಾಕ್ಟಿಕಲ್ ತರಬೇತಿ ಇಟ್ಟುಕೊಳ್ಳಿ’ ಅಂತ ಜಗದ್ಗುರು ರೇಣುಕಾಚಾರ್ಯ ಅವರು ಅಪ್ಪಣೆ ಕೊಡಿಸಿದ್ದರಿಂದ ತಿಂಗಳುಗಟ್ಟಲೇ ಕಷ್ಟಪಟ್ಟು ಒಂದು ಶಿಬಿರವನ್ನೇ ಆಯೋಜಿಸಿದೆವು. ಅದಕ್ಕ ವಿವರವಾದ ವೇಳಾಪಟ್ಟಿ ತಯಾರು ಮಾಡಿದ್ದೆವು.
ಶಿಬಿರ ತುಂಬ ಚೆನ್ನಾಗಿ ನಡೆಯಿತು. ಅದೊಂದು ಹೊಸ ರೀತಿಯ ಪ್ರಯೋಗ, ತುಂಬ ಇಂಟರೆಸ್ಟಿಂಗ್ ಅಂತ ಅನ್ನಿಸಿತು. ಓದುಗರಿಗೂ ಕುತೂಹಲ ಇರಬಹುದು ಅಂತ ಅನ್ನಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಬೆಳಿಗ್ಗೆ ಐದು ಗಂಟೆಗೆ ಊರ ಹೊರಗಿನ ರಿಸಾರ್ಟಿನಲ್ಲಿ ವಾಕಿಂಗ್ ಹಾಗೂ ವ್ಯಾಯಾಮ. ದಿನಾಲೂ ವಾಕಿಂಗ್ ಮಾಡದೇ ಇದ್ದರೂ ಟೀವಿ ಕ್ಯಾಮೆರಾದ ಮುಂದೆ ತೋರಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ನಿಕಟಪೂರ್ವ ಶಾಸಕರೊಬ್ಬರಿಂದ ಟ್ರೇನಿಂಗ್.
ಆಮೇಲೆ ತೂಕ ಇಳಿಸಿಕೊಳ್ಳುವುದರ ಬಗ್ಗೆ ಧರಂಸಿಂಗ್ ಹಾಗೂ ನಿತಿನ್ ಗಡ್ಕರಿ ಅವರಿಂದ ಚಿಂತನ. (ಇನ್ನೇನು ಅವರು ಕಸರತ್ತು ಮಾಡಿ ತೋರಿಸಲಿದ್ದಾರೆಯೇ?)
`ಸರ್ ನೀವು ತೂಕ ಇಳಿಸಲು ಏನು ಮಾಡಬೇಕು ಎಂದೇನೂ ಹೇಳಬೇಡಿ, ಏನೇನು ಮಾಡಬಾರದು’ ಎಂದು ಹೇಳಿ ಎಂದು ನಾವು ಅವರಿಗೆ ವಿನಂತಿ ಮಾಡಿಕೊಂಡೆವು. ಅದಕ್ಕೇ ಈ `ಚಿಂತನ’ ವ್ಯವಸ್ಥೆ. ಅವರು ಕೂತು ಮಾತಾಡಲಿಕ್ಕೆ ಮಹಾರಾಜಾ ಸೈಜಿನ ನಾಲಕ್ಕು ಕುರ್ಚಿ ತರಿಸಿದೆವು. (ಎರಡೆರಡು ಕುರ್ಚಿ ಒಬ್ಬೊಬ್ಬರಿಗೆ ಬೇಕಲ್ಲವೇ!)
ಅನಂತರ ಕೆಂಪು ಬಣ್ಣದ ಟೀ ಶರ್ಟ್ ನೊಂದಿಗೆ ಹಳದೀ ಬಣ್ಣದ ಜೀನ್ಸ್ ಪ್ಯಾಂಟ್ ಮ್ಯಾಚ್ ಮಾಡಿ ಹಾಕಿಕೊಂಡು ಮಿಂಚುವುದು ಹೇಗೆ ಅಂತ ಇತ್ತೀಚೆಗಷ್ಟೆ ಅನರ್ಹರಾದ ಶಾಸಕರೊಬ್ಬರಿಂದ ತರಬೇತಿ.
ನಮ್ಮ ಶಿಬಿರದ ವಿಶೇಷ ಆಕರ್ಷಣೆ ಎಂದರೆ ಅಂಗಿ ಹರಿದುಕೊಳ್ಳುವ ಬಗ್ಗೆ ಸ್ಟೆಪ್-ಬೈ-ಸ್ಟೆಪ್ ತರಬೇತಿ. ಅದಕ್ಕೆ ಸಂಪನ್ಮೂಲ ವ್ಯಕ್ತಿ ಅಂತ ಮುಂಬಯಿಯಿಂದ ಸಲ್ಮಾನ್ ಖಾನ್ ಬಂದಿದ್ದರು. ಒಂದು ಗಂಟೆ ಕಾಲದಲ್ಲಿ ಹದಿನೈದು ಶರ್ಟು ಹರಿದು ತೋರಿಸಿದರು. ಕೊನೆಗೆ ವಂದನಾರ್ಪಣೆ ಮಾಡುವಾಗ ಕರ್ನಾಟಕದ ಬಗ್ಗೆ ಮಾತಾಡುತ್ತಾ ಭಾವುಕರಾದರು. “ನನಗೆ ಅನ್ನದ ದಾರಿ ತೋರಿಸಿದವರೇ ಗೂಳಿಹಟ್ಟಿ ಅಣ್ಣಾ ಅವರು. ಅವರು ಇಲ್ಲದಿದ್ದರೆ ನಾವೆಲ್ಲ ನಮ್ಮಪ್ಪನಂತೆ ಹಿಂದಿ ಚಿತ್ರಗಳ ಹಾಡು ಬರೆದುಕೊಂಡು ಇರಬೇಕಿತ್ತು,” ಅಂದರು. “ಈ ಬಾಲಿವುಡ್ ತುಂಬ ಕ್ರೂರ ಜಗತ್ತು. ಎರಡೆರಡು ಮೂರು ಮೂರು ಮದುವೆಯಾದವರದ್ದೇ ಸಾಮ್ರಾಜ್ಯ. ಇನ್ನು ಡೇಟ್ ಬಾರ್ ಆಗುತ್ತಿದ್ದರೂ ಮದುವೆಯಾಗಲಾರದ ನನ್ನಂತಹವರನ್ನು ಯಾರು ಕೇಳುತ್ತಿದ್ದರು ಹೇಳಿ?” ಅಂತ ಕಣ್ಣೀರು ಹಾಕಿದರು.
ಅನಂತರ ಒಂದು ಬೈಠಕ್ ಅದರಲ್ಲಿ ಭ್ರಷ್ಟಾತಿ ಭ್ರಷ್ಟರನ್ನು ಸಮರ್ಥಿಸಿಕೊಳ್ಳುವುದು ಹೇಗೆ? ಎನ್ನುವುದರ ಬಗ್ಗೆ ಆಚಾರ್ಯ ಅವರಿಂದ ಉಪನ್ಯಾಸ. ಅದು ಚಹಾ ಕುಡಿಯದವರು ಬ್ರೂಕ್ ಬಾಂಡ್ ಲಿಪ್ಟನ್ ಕಂಪನಿ ಸೇಲ್ಸ್ ಏಜೆಂಟ್ ಆದಷ್ಟೇ ಕಷ್ಟ ಎಂದ ಅವರ ಅಂಬೋಣ.
ಎಲ್ಲರಿಗಿಂತ ತಡವಾಗಿ ಬಂದವರು ಸುರೇಶಕುಮಾರ್. `ನಮಗೂ ಕರಿಯರ್ ಚಿಂತೆ ಶುರುವಾಗಿದೆ. ರಾಜಕೀಯದ ನಂತರ ನಾನು ಏನಾದರೂ ಮಾಡಬೇಕು ಅಂತ ರಮೇಶ ಕುಮಾರ್ ಅವರ ಹತ್ತಿರ ಸಲಹೆ ಕೇಳಿದೆ. ಅವರು ಟೀ ಎನ್ ಸೀತಾರಾಮ್ ಹತ್ತಿರ ಕರೆದುಕೊಂಡು ಹೋಗಿದ್ದರು. ಹೀಗಾಗಿ ತಡವಾಯಿತು’, ಅಂದರು.
ಅವರು
1. ಯಾವುದೇ ಕಾನೂನು ವಿಶ್ವವಿದ್ಯಾಲಯದಲ್ಲಿ ಕಲಿಸದ ಲಾ ಪಾಯಿಂಟ್ ಗಳನ್ನು ಹಾಕಿ ಸದನದಲ್ಲಿ ಚರ್ಚೆ ನಿಲ್ಲಿಸುವುದು ಹೇಗೆ?
2. ಮಸೂದೆಗಳಲ್ಲಿನ ವಿವಾದಾತ್ಮಕ ವಿಷಯಗಳನ್ನು ವೈಟನರ್ ಹಾಕದೇ ಅಳಿಸುವುದು ಹೇಗೆ?
3. ದೊಡ್ಡ ಗದ್ದಲ ಆಗಬಹುದಾದಂಥ ವಿಷಯಗಳನ್ನು ಸುಗ್ರೀವಾಜ್ಞೆ ಮೂಲಕ ಸದ್ದಿಲ್ಲದೇ ಸಾಧಿಸಿಕೊಳ್ಳುವುದು ಹೇಗೆ?
ಎನ್ನುವ ಮೌಲ್ಯಯುತ ವಿಷಯಗಳ ಬಗ್ಗೆ ತಿಳಿಸಿ ಹೇಳಿದರು. ತಮ್ಮ ನೋಟ್ಸ್ ಗಳನ್ನು ಇನ್ವಿಸಿಬಲ್ ಇಂಕ್ ನಲ್ಲಿ ಬರೆದುಕೊಂಡು ಬಂದಿದ್ದರು.
ಊಟಕ್ಕಿಂತ ಮುಂಚೆ ಒಂದು ಪ್ರಮುಖ ಸಭೆ. ಗೋ ಹತ್ಯೆ ನಿಷೇಧದ ಕಾಯಿದೆ ಜಾರಿಗೆ ಬಂದ ನಂತರವೂ ಕೈ-ಕಾಲು ಕತ್ತರಿಸುವುದು ಹೇಗೆ? ಎನ್ನುವುದರ ಬಗ್ಗೆ ಈಶ್ವರಪ್ಪ ಅವರಿಂದ ಪ್ರಾತ್ಯಕ್ಷಿತೆ.
ಊಟದ ನಂತರ ವಿಶ್ರಾಂತಿ.
ಅನಂತರ ಒಂದು ಗಂಭೀರ ಸಭೆ. ಅದರಲ್ಲಿ ಬೋಪಯ್ಯ ಅವರು ಎರಡು ವಿಷಯಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
1. ಎರಡು ಮನೆ ಬಾಡಿಗೆ ಪಡೆದೂ ರಾತ್ರಿ ಕಚೇರಿಯಲ್ಲಿ ಮಲಗುವುದು ಹೇಗೆ?
2. ಬೆಳಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಕೆಲಸ ಮಾಡದ ಸರಕಾರಿ ನೌಕರರಿಂದಲೇ ನಡುರಾತ್ರಿ ಎರಡು ಗಂಟೆಗೆ ಸರಕಾರಿ ಆದೇಶ ಹೊರಡಿಸುವುದು ಹೇಗೆ?
ದೇಶದ ಮುಂದಿರುವ ಇಂತಹ ಗಂಭೀರ ಸವಾಲುಗಳ ಬಗ್ಗೆ ಸವಿವರವಾಗಿ ಹೇಳಿದರು.
ಚಹಾದ ನಂತರ ಮಾನಪ್ಪ ವಜ್ಜಲ ಅವರಿಂದ ಕಣ್ಕಟ್ಟು. ಸಾವಿರಾರು ಜನರ ಮಧ್ಯೆ ಅದೃಶ್ಯ ನಾಗುವ ಕಲೆಯ ಪ್ರದರ್ಶನ. ಇದಕ್ಕೊಂದು ಸಣ್ಣ ಉಪಕಥೆ ಇದೆ. ನಾವು ಅವರನ್ನ ಒಪ್ಪಿಸಲು ಅವರ ಮನೆಗೆ ಹೋದಾಗ ಅವರು ದಕ್ಷಿಣ ಆಫ್ರಿಕಾದ ಮಾಯಾಜಾಲದ ಕಾಲೇಜಿನಲ್ಲಿ ವಿಸಿಟಿಂಗ್ ಪ್ರೊಫೆಸರ್ ಅಂತ ಪಾಠ ಮಾಡಲು ಹೋಗಿ ವಾಪಸ್ ಬಂದಿದ್ದರು.
ಶಾಸಕರ ಮನೆಯ ಜಗಲಿಯಲ್ಲಿ ಕಲ್ಕತ್ತಾದಿಂದ ಬಂದ ಪೀಸಿ ಸರಕಾರ ಕಾಯುತ್ತಾ ಕೂತಿದ್ದರು. `ನೀವೇನು ಇಲ್ಲಿ ಅಂದರೆ `ಅಯ್ಯೋ ನಾವೆಲ್ಲ ಸ್ಟೇಜ್ ಮೇಲೆ ಮಾತ್ರ ಜಾದೂ ಮಾಡ್ತೇವೆ ಸರ್, ಇವರು ನಿಜಜೀವನದಲ್ಲಿ ಮಾಡುತ್ತಾರಲ್ಲಾ, ಅದಕ್ಕೇ ಇವರ ಹತ್ತಿರ ಕಲಿಯಕ್ಕ ಬಂದಿದ್ದೇವೆ’ ಅಂದರು. ಆದರೆ ಶಾಸಕರು ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. `ನಾನು ಆ ಡೇವಿಡ್ ಕಾಪರ್ ಫೀಲ್ಡ್ ನನ್ನೇ ಶಿಷ್ಯ ಅಂತ ಸ್ವೀಕರಿಸಿಲ್ಲ. ಇನ್ನು ನೀನ್ಯಾರಯ್ಯ?’ ಅಂತ ಬೈದು ಕಳಿಸಿದರು. ಅವರು ಹೋದ ಮೇಲೆ `ಅಲ್ರೀ ಸರ, ಇಂಥವರಿಗೆ ನಮ್ಮ ಟ್ರೇಡ್ ಸೀಕ್ರೆಟ್ ಹೆಂಗ ಹೇಳಿ ಕೊಡೋದು? ನಾವು ಭಾಳ ಕಷ್ಟ ಪಟ್ಟು ಕಲ್ತೇವಿ. ಹಿಂದಕ ಗುರುಕುಲ ಪರಂಪರೆಯೊಳಗ ಗುರುವಿನ ಮನ್ಯಾಗ ಇದ್ದು, ಅವರ ಕುಟುಂಬದ ಸೇವಾ ಮಾಡಿ ಒಂದು ಚೂರು ಪಾರು ಕಲಿತ ಹಂಗ, ನಾವು ನಮ್ಮ ನಾಯಕರ ಸೇವಾ ಮಾಡಿ ಕಲಿತೇವಿ. ಇಲ್ಲಾಂದರ
`ಚುನಾವಣೆಯಲ್ಲಿ ಎಲ್ಲರ ಮನೆಯಂಗಳದಲ್ಲಿ ಕಾಣಿಸಿಕೊಂಡು ನಂತರ ಯಾರಿಗೂ ಕಾಣಿಸದಂತೆ ಇರೋದು ಹೇಗೆ’ ಅನ್ನೋ ಕೋರ್ಸ್ ಯಾರು ಹೇಳಿಕೊಡ್ತಾರ ಹೇಳ್ರಿ? ಇನ್ನು `ಪಕ್ಷದ ಅಧ್ಯಕ್ಷರ ಕೈಗೆ ಸಿಗದೇ ಟೀವಿ ಚಾನೆಲ್ ಗಳಿಗೆ ಬೈಟ್ ಕೋಡೊದು ಹೇಗೆ’ ಅನ್ನೊದಂತೂ ಪೊಸ್ಟ್ ಗ್ರ್ಯಾಜುಏಟ್ ಕೋರ್ಸ್. ಅದಕ್ಕೆ ಜೀವನ ಪರ್ಯಂತ ಗುರುಗಳ ಹಿಂದ ತಂಬೂರಿ ಹಿಡಕೊಂಡ ಇರಬೇಕಾಗ್ತದ, `ನಮ್ಮ ಗುರುಗಳು ಜೀವಂತ ಇರೋತನಕಾ ಚುನಾವಣೆಗೆ ನಿಲ್ಲೋದಿಲ್ಲಾ’ ಅಂತ ಆಣೆ ಪ್ರಮಾಣ ಮಾಡಬೇಕಾಗ್ತದ. ಅಷ್ಟು ಕಷ್ಟಾ ಪಟ್ಟು ಸಂಪಾದಿಸಿದ ವಿದ್ಯಾನ ಈ ನನ್ನ ಮಗನಿಗೆ ಹೇಳಿ ಕೊಡ್ಲಾ? ಅವ ಹೋಗಿ ಅದನ್ನೆಲ್ಲಾ ಸೀಕ್ರೆಟ್ಸ್ ಆಫ್ ದ ಮ್ಯಾಜಿಷಿಯನ್ ರಿವೀಲ್ಡ್ ಅನ್ನೋ ಟೀವಿ ಪ್ರೋಗ್ರಾಂದಾಗ ಹೇಳಿಬಿಡ್ತಾನ. ಆಮ್ಯಾಲೆ ಮುಂದಿನ ಇಲೆಕ್ಷನ್ನೇನು ಇವರ ಅಪ್ಪ ನಿಲ್ತಾನ?” ಎಂದು ಸಿಟ್ಟು ಮಾಡಿಕೊಂಡರು. ಯಡ್ಯೂರಪ್ಪ ಅವರ ಬೆಡ್ ರೂಂನಿಂದ ಕದ್ದು ತಂದಿದ್ದ ಗ್ಲಿಸರಿನ್ ಬಾಟಲ್ ನಿಂದ ಒಂದೆರಡು ಹನಿ ತೆಗೆದು ಕಣ್ಣಿಗೆ ಹಾಕಿಕೊಂಡರು. ತಮ್ಮ ಆತ್ಮ ಗುರುವನ್ನೇ ನಾಚಿಸುವಂತೆ ಅತ್ತರು.
ನಂತರ ಶಿಬಿರದಲ್ಲಿ ಅವರು ಮಾಡಿದ ಕರಾಮತ್ತುಗಳನ್ನು ನೋಡಿ ಜನ ಕೈ ಸೋಲುವವರೆಗೆ ಚಪ್ಪಾಳೆ ತಟ್ಟಿದರು.
ಸಂಜೆ ಇನ್ನೊಂದು ಇಂಟಲೆಕ್ಟುವಲ್ ತರಬೇತಿ. “ಯಾರಿಗೂ ಅರ್ಥ ಆಗದ ಹಾಗೆ ಟೀವಿ ಕ್ಯಾಮೆರಾದ ಮುಂದೆ ಉದ್ದುದ್ದಕ್ಕೆ ಮಾತಾಡಿ ರಿಪೋರ್ಟರ್ ಗಳನ್ನು ಕನ್ ಫ್ಯೂಸ್ ಮಾಡುವುದು ಹೇಗೆ” ಅಂತ ನಾನು ಹೇಳ್ತೇನೆ ಅಂತ ಗೋಪಾಲ ಕೃಷ್ಣ ಮುಂದೆ ಬಂದರು. ಮಂತ್ರಿಮಂಡಲದಲ್ಲಿ ಅವಕಾಶ ಸಿಗದಿದ್ದರೇನು, ಇಲ್ಲಿಯಾದರೂ ಕೊಡೊಣ ಅಂತ ಕೊಟ್ಟೆವು.
ನಾನು ಮಂತ್ರಿಯಾಗಬೇಕು, ನನಗೆ ಅಧಿಕಾರ ಬೇಕು, ಲೆಕ್ಕಕ್ಕೆ ಸಿಗದಷ್ಟು ಹಣ ಬೇಕು ಎನ್ನುವುದನ್ನೇ ಬೇರೆ ಮಾತುಗಳಲ್ಲಿ ಹೇಳುವುದು ಹೇಗೆ ಅನ್ನುವುದಕ್ಕೆ ಅವರು ಒಂದು ಡಿಕ್ಷನರಿ ಮಾಡಿದ್ದರು. ಅದರಲ್ಲಿ ಶಬ್ದಗಳಲ್ಲದೇ ವಾಕ್ಯಗಳಿಗೂ ಕೂಡ ಅರ್ಥ ಕೊಡಲಾಗಿತ್ತು.
ಉದಾಹರಣೆಗೆ
1. ನಮ್ಮ ಜಿಲ್ಲೆಗೆ ರಾಜ್ಯದ ಆಡಳಿತ ಯಂತ್ರದಲ್ಲಿ ಪ್ರಾತಿನಿಧ್ಯ ಸಾಲದು ಎಂದರೆ ನನ್ನನ್ನು ಮಂತ್ರಿ ಮಾಡಿ ಎಂದು ಅರ್ಥ.
2. ನಮ್ಮ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದರೆ ನನಗೆ ಅಧಿಕಾರ ಬೇಕು ಅಂತ.
3. ನಮ್ಮ ಜಿಲ್ಲೆಗೆ ನೀಡಿರುವ ಅನುದಾನ ಸಾಲದು ಎಂದರೆ ನನಗೆ ಹಣ ಬೇಕು. ಹೇಗಾದರೂ ಮಾಡಿ ಕೊಡಿ ಅಂತ.
4. ನಮ್ಮ ಪಕ್ಷದ ನಾಯಕತ್ವ ವಿಫಲ ಎಂದರೆ ಬೇರೆ ಪಕ್ಷದವರು ನನ್ನ ಮುಂದಿನ ಚುನಾವಣೆ ಖರ್ಚು ನೋಡಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದರ್ಥ.
ಅದರ ನೂರು ಪ್ರತಿಗಳನ್ನು ಮಾಡಿ ಶಿಬಿರಾರ್ಥಿಗಳಿಗೆ ಹಂಚಿದೆವು. ಅದು ಎಷ್ಟು ಜನಪ್ರಿಯವಾಯಿತು ಎಂದರೆ ಶಿಬಿರಕ್ಕೆ ಬರಲಾಗದವರು ಅದನ್ನು ಜೆರಾಕ್ಸ್ ಮಾಡಿಸಿ ತರಿಸಿಕೊಂಡರು. ಆ ಜೆರಾಕ್ಸ್ ಅಂಗಡಿಯವನು ಅದನ್ನು ಮಾರಾಟ ಮಾಡುವ ದೊಡ್ಡ ದಂಧೆ ಶುರುಮಾಡಿದ.
`ಈ ವಿಷಯದಲ್ಲಿ ಇವರಿಗಿಂತ ಚೆನ್ನಾಗಿ ನಾನು ಮಾತಾಡ್ತೇನೆ. ಹಿಂದಿನ ಜನ್ಮದಲ್ಲಿ ನಾನು ಅಂಬೇಡ್ಕರ್ ಅವರು ಕಲಿತ ಕಾನೂನು ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದೆ’ ಅಂತ ಉಗ್ರಪ್ಪ ಬಂದರು. ಬೇಡ ಬೇಡವೆಂದರೂ ಹಟ ಹಿಡಿದು ವೇಳಾಪಟ್ಟಿಯಲ್ಲಿ ತಮ್ಮ ಹೆಸರು ಬರೆಸಿದರು.
`ಅವರು ಬಂದ ಮೇಲೆ ನಾನೂ ಬರುವವನೇ’ ಅಂತ ದತ್ತ ಬಂದರು. ಆದರೆ ಅವರು ಆಟೋ ರಿಕ್ಷಾದಲ್ಲಿ ಬಂದಿದ್ದರಿಂದ ತಡವಾಗಿ ಬಂದರು. ನಮ್ಮ ವೇಳಾಪಟ್ಟಿಯಲ್ಲಿ ಸೇರಿಸಲಿಕ್ಕೆ ಆಗಲಿಲ್ಲ. ಅದಕ್ಕೆ ವಿಷಾಧವಿದೆ.
ರಾತ್ರಿ ನಮ್ಮ ಶಿಬಿರದ ಅಧಿದೇವತೆಯಾದ ರೇಣುಕಾಚಾರ್ಯ ಅವರಿಂದ ವಿಶೇಷ ಸಭೆ,
ಅದರಲ್ಲಿ ಪ್ರಾಥಮಿಕ ಹಾಗೂ ಕಿರಿಯ ಮಾಧ್ಯಮಿಕ ಶಾಲೆ ಹುಡುಗರಿಗೆ ಸಾರಾಯಿ ಕುರಿತು ಜಾಗೃತಿ ಮೂಡಿಸುವುದು ಹೇಗೆ ಎನ್ನುವುದರ ಬಗ್ಗೆ ಒಂದೆರಡು ಮಾತು. ನಮಗೆಲ್ಲ ತೋರಿಸಲು ಸಾರಾಯಿಯನ್ನು ನೀರಿನಷ್ಟೇ ಸಲೀಸಾಗಿ ಕುಡಿಯುವ ದಾವಣಗೆರೆಯ ಹತ್ತು ವರ್ಷದ ಹುಡುಗನನ್ನು ಕರೆದುಕೊಂಡು ಬಂದಿದ್ದರು.
ಅನಂತರ ಶಕ್ತಿವಿಶಿಷ್ಟಾದ್ವೈತದ ಸಿದ್ಧಾಂತದ ಬಗ್ಗೆ ರೇಣುಕಾಚಾರ್ಯ ಅವರಿಂದ ಪ್ರವಚನ. ಅದರಲ್ಲಿ ಅವರು ಆಯ್ಕೆ ಮಾಡಿಕೊಂಡ ವಿಷಯ. `ಇಲ್ಲಿ ಸಲ್ಲುವವರು ಎಲ್ಲೆಲ್ಲಿಯೂ ಸಲ್ಲುವವರಯ್ಯಾ!’
ಬಿಸಿಲು ಇಳಿದ ಮೇಲೆ ವ್ಯಕ್ತಿತ್ವ ವಿಕಸನ ಶಿಬಿರ.
`ಬ್ರಹ್ಮಚರ್ಯ ಹಾಗೂ ಹಠಯೋಗ’ ಕುರಿತು ಹಾಲಪ್ಪ ಅವರಿಂದ ಎರಡು ದಿನದ ವಿಶೇಷ ಕ್ಯಾಂಪ್. ಬರೀ ಥಿಯರಿ ಬೇಡ ಎಂದು ಗಲಾಟೆ ಮಾಡಿದ ಶಿಬಿರಾರ್ಥಿಗಳನ್ನು ಹಿಂದಿನ ದಿನವೇ ಬಲವಂತದಿಂದ ಹೊರ ಹಾಕಲಾಗಿತ್ತು.
ರಾತ್ರಿ ಮಲಗುವ ಮುನ್ನ `ಮಕಮಲ್ ಟೋಪಿ ಮತ್ತು ಅದರ ವಿವಿಧ ಉಪಯೋಗಗಳು’ ಎನ್ನುವುದರ ಬಗ್ಗೆ ಕಟ್ಟಾ ಹಾಗು ಕುಟುಂಬದವರಿಂದ ಬೀದಿ ನಾಟಕ. ಮೊದಲಿಗೆ ಎಲ್ಲರೂ ತುಂಬ ನಕ್ಕರೂ ಕೊನೆ ಕೊನೆಗೆ `ಎಷ್ಟೊಂದು ರಿಯಲಿಸ್ಟಿಕ್ ಆಗಿದೆಯಲ್ಲ’ ಅಂತ ಗಂಭೀರ ಚಿಂತನೆಗೆ ತೊಡಗಿದರು. ಅವರ ಅಟೋಗ್ರಾಫ್ ತೆಗೆದುಕೊಳ್ಳಲು ಹೋದ ಕಲಾಭಿಮಾನಿಗಳಿಗೆ `ನನ್ನ ಮಗ ಸಹಿ ಮಾಡ್ತಾನೆ. ನಾನು ಮಾಡಿದರೂ ಒಂದೇ, ಅವನು ಮಾಡಿದರೂ ಒಂದೇ’ ಅಂತ ಹೇಳಿ ಕಟ್ಟಾ ಅವರು ಜಾರಿಕೊಂಡರು.
`ಯಾರು ಬರದಿದ್ದರೂ ಇಲ್ಲ ನಾನು ಖಂಡಿತ ಬರ್ತೇನೆ’ ಅಂತ ಹೇಳಿದ ಶೋಭಾ ಮೇಡಂ ಅವರು ಬರಲಿಲ್ಲ. ಅವರು ಸದಾನಂದ ಗೌಡರ ಜತೆ ಕಾಲ್ಗೇಟ್ ಕಂಪನಿ ಜಾಹೀರಾತು ಶೂಟಿಂಗ್ ನಲ್ಲಿ ಬಿಸಿಯಾಗಿದ್ದರಂತೆ. ಸಚಿವರೇ ಬರಲಿಲ್ಲವೆಂದ ಮೇಲೆ ನಾನಿದ್ದು ಏನು ಪ್ರಯೋಜನ ಅಂತ ಕರೆಂಟೂ ಹೋಯಿತು. ಕ್ಯಾಂಪಿಗರು ಅನಿವಾರ್ಯವಾಗಿ ಮಲಗಲೇಬೇಕಾಯಿತು.
ನಾವು ಇಷ್ಟೆಲ್ಲಾ ಮಾಡಿ ಮನೆಗೆ ಬರುವುದಕ್ಕೂ, ಗೆಳೆಯ ಶ್ರೀರಾಮುಲು ಅವರ ಫೋನ್ ಬರುವುದಕ್ಕೂ ಸರಿಹೋಯಿತು.
ಅವರ ಚೇರ್ಮನ್ ಜನಾರ್ದನರೆಡ್ಡಿ ಹಾಗೂ ಗುರುಬಂಧು ಜಗನ್ ಮೋಹನರೆಡ್ಡಿ ಅವರಿಗೆ ಮುಂಬೈ ಹಾಗೂ ದೆಹಲಿಯಲ್ಲಿ ಸ್ವಲ್ಪ ಕೆಲಸ ಇತ್ತಂತೆ.
ಅಮೇರಿಕ ಅಧ್ಯಕ್ಷ ಬರಾಕ್ ಓಬಾಮಾ ಅವರು ಮುಂಬೈ-ದೆಹಲಿಗೆ ಭೇಟಿ ನೀಡುವವರಿದ್ದರು.
ಮುಂಬೈಯಲ್ಲಿ ಬಿಸಿನೆಸ್ ಮೆನ್ ಗಳ ಜೊತೆ ಹಾಗೂ ದೆಹಲಿಯಲ್ಲಿ ರಾಜಕಾರಣಿಗಳ ಜೊತೆ ಓಬಾಮಾ ಅವರು ಭೇಟಿ ಮಾಡುವ ಪ್ರೋಗ್ರಾಂ ಇದೆ. ನಮ್ಮ ಚೇರ್ಮನ್ನರು ಬಿಸಿನೆಸ್ ಮೆನ್ ಗಳು ನಾಚುವಂತೆ ಬಿಸಿನೆಸ್ಸು ಹಾಗೂ ರಾಜಕಾರಣಿಗಳು ಹೊಟ್ಟೆ ಉರಿದುಕೊಳ್ಳುವ ಹಾಗೆ ರಾಜಕಾರಣ ಎರಡೂ ಮಾಡುತ್ತಾರಾದ್ದರಿಂದ ಓಬಾಮಾ ಅವರಿಗೆ ಇವರನ್ನು ಭೇಟಿ ಮಾಡುವುದು ಅನಿವಾರ್ಯ ಅನ್ನಿಸಿತಂತೆ.
ಇನ್ನು ಜಗನ್ ಅವರು ಕಡಪ ಜಿಲ್ಲೆಯ ಸಂಸತ್ ಸದಸ್ಯರಾದರೂ ಅವರು ಇರುವುದು ಬೆಂಗಳೂರಿನಲ್ಲಿ, ಆದ್ದರಿಂದ ನಮ್ಮೂರಿಗೆ ಒಂದು ಸಾರಿ ಬಂದು ಹೋಗಿ ಅಂತ ಅವರನ್ನು ಕರೆಯಲು ಹೋಗಬೇಕಾಗಿತ್ತು.
ಇವರಿಬ್ಬರ ಜತೆ ಒಂದು ಮಾಧ್ಯಮ ನಿಯೋಗ ಹೋಗಲಿದೆ, ಅದರ ಸದಸ್ಯರಾಗಿ ನೀವು ಹೋಗಿ ಅಂತ ರಾಮುಲು ಅವರು ಹೇಳಿದರು.
ಅಯ್ಯೋ ಇಲ್ಲೇ ಬಹಳಷ್ಟು ಕೆಲಸ ಇದೆ. ನಾನು ಹೋಗಲ್ಲ ಅಂದೆ. ಅವರು ಬಿಡಲಿಲ್ಲ.
ಕೊನೆಗೆ ಗೂಳಿಹಟ್ಟಿ ಅವರು ನಮ್ಮ ಮನೆತನಕ ಬಂದರು. ನಿಮ್ಮ ಸೇವೆ ದೇಶಕ್ಕೆ ಬೇಕು, ನೀವು ದೊಡ್ಡ ಮನಸ್ಸು ಮಾಡಿ ಒಪ್ಪಿಕೊಳ್ಳಬೇಕು, ಅಂದರು. ಇಷ್ಟೊತ್ತೂ ತಮ್ಮ ಅಂಗಿ ಹರಕೊಂಡವರು ಈಗ ಇಲ್ಲ ಅಂದರೆ ನನ್ನ ಅಂಗಿ ಹರಿಯಬಹುದು, ಅದೆಲ್ಲಾ ಘೋಟಾಲಾ ಯಾರಿಗೆ ಬೇಕು ಅಂತ ನಾನು ಹೂಂ ಎಂದೆ.
ಕೊನೆಗೂ ನಾನು ಮುಂಬೈ ವಿಮಾನ ಹತ್ತಿದೆ. ಅಲ್ಲಿಗೆ ಒಬಾಮಾ ಬರಾಕ, ನಾವು ಹೋಗಾಕ, ಸರಿ ಆಯಿತು.
(ವಿಮಾನ ಇಳಿದ ನಂತರ ಮತ್ತೆ ಮುಂದಿನ ಕಥೆ)
0 Comments