ಹೃಷಿಕೇಶ್ ಬಹದೂರ್ ಹರಿದ್ವಾರದಿಂದ ಬರೆದ ರಾಮದೇವಾಯಣ
ಹೃಷಿಕೇಶ್ ಬಹದ್ದೂರ್ ದೇಸಾಯಿ
ಶುಕ್ರವಾರ, 24 ಜೂನ್ 2011 (02:53 IST)
ಪಕ್ಕದ ಮನೆಗೆ ಸಕ್ಕರೆ ಕಡ ತರಲು ಸಹ ಮನೆಯಿಂದ ಹೊರ ಹೋಗದ ನಮ್ಮವ್ವ “ನಾನು ಇರೋದರಾಗ ಹರಿದ್ವಾರಕ್ಕೆ ಹೋಗಬೇಕು. ಕರಕೊಂಡು ಹೋಗ, ಬ್ಯಾರೆ ದಾರಿನ ಇಲ್ಲಾ ಈಗ” ಅಂತ ಕೂತಾಗ ನನಗೆ ಬೇರೆ ದಾರಿ ಕಾಣಲಿಲ್ಲ. ಕೊನೆಗೂ ಅವಳನ್ನು ಕರೆದುಕೊಂಡು ನಡೆದೆ. ಆಟೋ, ಬಸ್ಸು, ಟ್ರೇನು, ಜಟಕಾ, ಕುದುರೆ ಸವಾರಿ, ಡೋಲಿ ಇತ್ಯಾದಿ ನೂರಾ ಎಂಟು ವಾಹನಗಳನ್ನು ಏರಿ, ಇಳಿದು ಕೊನೆಗೆ ಹರಿದ್ವಾರದಲ್ಲಿ ನಿಂತೆವು.
ಬೆಳಗಿನ ಚಳಿಯಲ್ಲಿ ಸಣ್ಣ ಹೋಟೆಲ್ ಒಂದರಲ್ಲಿ ಎರಡು ರೂಪಾಯಿಗೆ ಚಹಾ ಕುಡಿಯುತ್ತಿದ್ದಾಗ— ಅಲ್ಲೇ, ಅಲ್ಲೇ ನೋಡಿ ನನಗೆ ಜ್ಞಾನೋದಯವಾಗಿದ್ದು.
ಅಲ್ಲಿ ಸಿಕ್ಕ ಕೆಲವು ಜನರಿಂದ ನನಗೆ ಭಾರಿ ಕುತೂಹಲಕರ ಮಾಹಿತಿ ದೊರೆಯಿತು. ಅದರಿಂದ ನನಗೆ ನಮ್ಮ ದೇಶವನ್ನು ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂದು ಏಕೆ ಡಿವೈಡ್ ಮಾಡಿದ್ದಾರೆ ಎಂದು ನನಗೆ ಅರ್ಥವಾಯಿತು. ಅಷ್ಟೇ ಅಲ್ಲ, ಸಾವಿರಾರು ವರುಷಗಳಿಂದ ಮಹಾನ್ ಪಂಡಿತರ ಲೆವಲ್ಲಿನಲ್ಲಿ ನಡೆಯುತ್ತಿರುವ ಹರ ಹೆಚ್ಚೋ, ಹರಿ ಹೆಚ್ಚೋ ಎನ್ನುವ ವಾದವೂ ನನ್ನ ಮನಸ್ಸಿನಲ್ಲಿ ಕೊನೆಗೊಂಡಿತು.
ನಾವೆಲ್ಲ ಅದಕ್ಕೆ ‘ಹರಿದ್ವಾರ’ ಎಂದರೆ ಉತ್ತರದವರು ಅದಕ್ಕೆ ‘ಹರದ್ವಾರ’ ಎನ್ನುತ್ತಾರೆ. ಇನ್ನು ಹರಿದ್ವಾರ ಎನ್ನುವ ಹೆಸರಿರುವ ಊರಿನಲ್ಲಿ ಹರಿಯ ದೇವಸ್ಥಾನಗಳಿಗಿಂತ ಹರ ಮಂದಿರಗಳೇ ಹೆಚ್ಚು. ಹರನನ್ನು ನೋಡಲು ಹರಿದ್ವಾರದ ಮೂಲಕವೇ ಹೋಗಬೇಕು ಎಂತಲೋ ಅಥವಾ ಹರನನ್ನು ನೋಡಿದರೆ ಹರಿಯನ್ನು ನೋಡಿದಂತೆಯೇ ಎಂತಲೋ ಈ ಊರಿಗೆ ಆ ಹೆಸರನ್ನು ಇಟ್ಟಿರಬಹುದು ಅಂದುಕೊಂಡೆ.
ಅಲ್ಲೇ ಪಕ್ಕದ ಬೆಂಚಿನಲ್ಲಿ ಇದ್ದ ಇಬ್ಬರು ಹಿರಿಯರು ಅವಾಗಿವಾಗ ಮಾತಾಡುತ್ತಿದ್ದರು. ಅದು ಕನ್ನಡದಂತೆ ಕೇಳಿತು. ಮದುವೆಯಾಗಿ ಸುಮಾರು ವರ್ಷವಾಗಿರಬೇಕು. ತುಂಬ ಅಂಡರ್ ಸ್ಟ್ಯಾಂಡಿಗ್ ಇದೆ. ಕೇವಲ ಒಬ್ಬರನ್ನೊಬ್ಬರು ನೋಡಿಯೇ ತಿಳಿದುಕೊಳ್ಳುತ್ತಾರೆ. ಮಾತು ಬೇಕೆಂತೇ ಇಲ್ಲ ಅಂದುಕೊಂಡೆ. ಹತ್ತಿರಕ್ಕೆ ಹೋಗಿ ಮಾತಾಡಿಸಿದೆ. ಆಗ ಗೊತ್ತಾಯಿತು. ಇಬ್ಬರಿಗೂ ಕಿವಿ ಕೇಳುವುದು ಅಷ್ಟಕ್ಕಷ್ಟೇ.
ಅನೇಕ ಸಾರಿ ಪ್ರಯತ್ನ ಮಾಡಿದ ನಂತರ ಬಿಎಸ್ಸೆನ್ನೆಲ್ ಮೊಬೈಲ್ ಲೈನ್ ಸಿಕ್ಕಂತೆ ನಾನು ನೀವು ಕನ್ನಡದವರಾ ಅಂತ ಹದಿಮೂರು ನೂರು ಸಾರಿ ಕೇಳಿದ ಮೇಲೆ ಅವರು ನನ್ನ ಮಾತಿಗೆ ಉತ್ತರ ಕೊಟ್ಟರು. “ನೋ ಹಿಂದಿ, ಓನ್ಲಿ ಇಂಗ್ಲಿಷ್. ವಿ ಆರ್ ಫ್ರಂ ಮೈಸೋರ್” ಅಂತ ಅಂದರು. ಇಷ್ಟು ಚೆನ್ನಾಗಿ ಬೇರೆ ಭಾಷೆ ಮಾತಾಡುತ್ತಾರೆ ಎಂದರೆ ಇವರು ಕನ್ನಡಿಗರೇ ಅಂತ ಖಾತ್ರಿಯಾಯಿತು. ತಮಗೆ ಕೇಳುವುದು ಕಡಿಮೆ ಆದರೂ ಅವರು ಹೇಳುವುದು ಕಡಿಮೆ ಅಲ್ಲ ಅಂತ ನಂತರ ಗೊತ್ತಾಯಿತು.
ಅವರ ಹೆಸರು ತೆರಕಣಾಂಬಿ ಮಹೇಶ ರಾವ್. ಅವರೂ ಅವರ ಹೆಂಡತಿ ಮಹೇಶ್ವರಿ ರಾವ್ ಅವರು ಇಬ್ಬರೂ ಟೆಲಿಫೋನ್ ಇಲಾಖೆಯಲ್ಲಿ ಇದ್ದವರು. ಇವರ ಮಾವನಿಗೆ ಮೈಸೂರಿನ ಒಂಟೀಕೊಪ್ಪಲಿನ ಮೂಲೆಯಲ್ಲಿ ಮಹಾರಾಜರು ಕೊಟ್ಟ ೧೨೦ ಬೈ ೧೦೦ ಸೈಟಿನಲ್ಲಿ ಇವರು ಮೊನ್ನೆ ಮೊನ್ನೆ ಮನೆ ಕಟ್ಟಿದ್ದರು. ಇದ್ದ ಇಬ್ಬರು ಮಕ್ಕಳನ್ನು ಸಾಫ್ಟವೇರ್ ಓದಿಸಿದರು. ಅವರು ಅಮೆರಿಕೆಗೆ ಹೋದಾಗ ಖುಷಿಪಟ್ಟರು. ಒಬ್ಬ ಪಂಜಾಬಿ ಹುಡುಗಿಯನ್ನೂ, ಇನ್ನೊಬ್ಬ ಅದಕ್ಕಿಂತ ದೂರದ ಫ್ರಾನ್ಸಿನ ಹುಡುಗಿಯನ್ನೂ ಮದುವೆಯಾದಾಗ ಬೇಜಾರು ಮಾಡಿಕೊಂಡರು. ಮರು ವರ್ಷದ ಹಿಂದೆ ರಾವ್ ಆಂಟಿಗೆ ಆರ್ಥರೈಟಿಸ್ ಆರಂಭವಾದಾಗ ಯಾರೋ ಅವರಿಗೆ ಬಾಬಾ ಅವರ ಬಗ್ಗೆ ಹೇಳಿದರು. ಇವರು ತಲಾ ಎರಡೂವರೆ ಸಾವಿರ ರೂಪಾಯಿ ಕೊಟ್ಟು ಬಾಬಾ ಅವರ ಬೆಂಗಳೂರು ಕ್ಯಾಂಪ್ನಲ್ಲಿ ಭಾಗವಹಿಸಿದರು. ಆಗಿನಿಂದ ಅವರ ಬೆನ್ನು ಹತ್ತಿದ ಇವರು ಇನ್ನೂ ಬಿಟ್ಟೇ ಇಲ್ಲ. ಮೈಸೂರಿನ ಮನೆಯನ್ನೂ ಮಾರಿ ಈಗ ಹರಿದ್ವಾರದಲ್ಲಿ ಸೆಟ್ಲ್ ಆಗಿದ್ದಾರೆ. “ಇಲ್ಲೆಲ್ಲ ಇದೆ, ಆದರೆ ಒಂದೊಳ್ಳೆ ಫಿಲ್ಟರ್ ಕಾಫಿ ಸಿಗಲ್ಲ” ಅಂತ ಅನುಲೋಮ-ವಿಲೋಮ ಮಾಡುವಾಗಲೆಲ್ಲ ಮೈಸೂರಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ವ್ಯಾಯಾಮ ಮಾಡದೇ ಶತಮಾನಗಳೇ ಕಳೆದಿರುವುದರಿಂದ ಕಪಾಲಭಾತಿ ಮಾಡುವಾಗ
ನಿಟ್ಟುಸಿರು ಬಿಡುತ್ತಾರೆ.
ಅವರು ಮಾತು ಆರಂಭಿಸಿದರು. “ನೋಡಿ, ಬಾಬಾ ಹೇಳ್ತಾರೆ, ಭಾರತದ ೪೦೦ ಲಕ್ಷ ಕೋಟಿ ರೂಪಾಯಿ ಸ್ವಿಸರ್ ಲ್ಯಾಂಡಿನಲ್ಲಿ ಬಿದ್ದಿದೆ. ಅದನ್ನು ಬಳಸಿ ೩೦ ವರ್ಷ ಯಾವುದೇ ತೆರಿಗೆ ಹಾಕದೇ ಸರಕಾರ ನಡೆಸಬಹುದು, ೬೦ ಕೋಟಿ ಜನರಿಗೆ ಕೆಲಸ ಕೊಡಬಹುದು, ಉಳಿದ ೬೦ ಕೋಟಿ ಜನರಿಗೆ ಮನೆಯಲ್ಲಿಯೇ ಕೂಡಿಸಿ ತಿಂಗಳಿಗೆ ೨೦೦೦ ರೂಪಾಯಿ ಕೊಡಬಹುದು, ಯಾವುದೇ ಹಳ್ಳಿಯಿಂದ ದೆಹಲಿಗೆ ನಾಲ್ಕು ಲೇನ್ ರಸ್ತೆ ಮಾಡಬಹುದು, ವಿಶ್ವಬ್ಯಾಂಕ್ ಸಾಲ ವಾಪಸು ಕೊಡಬಹುದು,” ಅಂತ ಕಣ್ಣು ಹೊಡೆದರು. “ಅಲ್ಲ ಸಾರ್ ನಮ್ಮ ಕಪ್ಪು ಹಣವನ್ನು ಇಲ್ಲಿ ತಂದು, ಅದಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಬಿಳಿ ಮಾಡಲಿಕ್ಕೆ ಲೇಟ್ ಆಗುತ್ತೆ. ಆದರೆ ನೀವು ಈಗ ಹೇಳಿದ ಇತರ ಒಳ್ಳೆ ಕೆಲಸ ಯಾಕೆ ಬೇಗ ಶುರುಮಾಡಬಾರದು?” ಅಂದೆ. “ಹೇಗೆ ಮಾಡೋಣ, ದುಡ್ಡು ಎಲ್ಲಿದೆ?” ಎಂದರು ಅವರು. “ನಿಮ್ಮ ಬಾಬಾ ಹತ್ತಿರ ಇರೋ ಒಂದು ಸಾವಿರ ಕೋಟಿಯಿಂದಲೇ ಶುರುಮಾಡಬಹುದಲ್ಲವಾ,” ಅಂದೆ ಸುಮ್ಮನಾದರು. ಎರಡು ಸಾರಿ ಕಣ್ಣು ಹೊಡಕೊಂಡರು.
ನಾನು ಮೊದಲು ಅವರು ಏನೋ ಸೀಕ್ರೆಟ್ ಪಾಯಿಂಟ್ ಹೇಳಿದಾಗ ಮಾತ್ರ ಕಣ್ಣು ಹೊಡೆಯುತ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಅವರು ಹುಡುಗಿಯರಿಗೆ ಕೂಡ ಕಣ್ಣು ಹೊಡೆಯುವುದು ಕಂಡಮೇಲೆ ಕನ್ ಫ್ಯೂಸ್ ಆಯಿತು. ಅವರು ನಮ್ಮ ನಿತ್ಯಾನಂದನ ಕಸಿನ್ ಅಂತೂ ಅಲ್ಲ. ಹೀಗೇಕೆ ಅಂತ ಅವರನ್ನೇ ಕೇಳಿದೆ. “ಅಯ್ಯೋ ಅದು ಹಾಗಲ್ಲ ಅಂತ ಕಣ್ಣು ಮಿಟುಕಿಸಿದರು. ನೋಡಿ, ಅದು ಬಾಬಾ ಅವರು ಕಲಿಸಿದ್ದು. ಅವರು ಬೇಕಂತ ಮಾಡೋದಲ್ಲ. ಆ ದೇವರು ಅವರ ಮೂಲಕ ಮಾಡಿಸುವುದು. ಅದಕ್ಕೆ ಲೌಕಿಕ ಅರ್ಥ ಇಲ್ಲ. ಅದು ಪವಿತ್ರವಾದದ್ದು. ಬಾಬಾ ಅವರು ಕಣ್ಣು ಮಿಟುಕಿಸಿದಾಗಲೆಲ್ಲ ಈ ದೇಶಕ್ಕೆ ಒಳ್ಳಯದಾಗಿದೆ. ಅದಕ್ಕೇ ನಾವೆಲ್ಲ ಕಲಿತುಕೊಂಡಿದ್ದು. ಈಗ ಈ ಆಶ್ರಮದೊಳಗೆ ಬರಬೇಕು, ಇಲ್ಲಿರಬೇಕು, ಹೊರಗೆ ಹೋಗಬೇಕು ಅಂದರೆ ಅದನ್ನು ಬಳಸಲೇಬೇಕು. ಅದೊಂದು ಪಾಸವರ್ಡ ಇದ್ದಂಗೆ,” ಅಂತ ಅಂದರು.
ಅವರು ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಹೆಂಗಸರ ಹಾಲಿನಲ್ಲಿ ಅವ್ವನನ್ನು ಕಳಿಸಲು ಹೋದೆವು. ಅಲ್ಲಿ ಒಬ್ಬರು ಹಿರೀ ಹೆಂಗಸು ಕೂತಿದ್ದರು. ಅವರು ಹಿಂದಿಯಲ್ಲಿ ಏನೋ ಪುರಾಣದ ಕತೆ ಹೇಳುತ್ತಿದ್ದರು. ಇತರ ಹೆಂಗಸರೆಲ್ಲ ಅವರ ಸುತ್ತ ಕೂತಿದ್ದರು.
ಬಾಬಾ ಅವರನ್ನು ನೋಡಬೇಕೆಂದಿರಲ್ಲ, ಇಲ್ಲೇ ಹೊರಗೆ ಕೂಡೋಣ ಬನ್ನಿ. ಬರ್ತಾರೆ, ಅಂತ ರಾವ್ ಹೇಳಿದರು. ಅಲ್ಲೇ ಗಿಡದ ಕೆಳಗೆ ಕೂತೆವು.
ಅರ್ಧ ಗಂಟೆಯ ನಂತರ ಆ ಪುರಾಣ ಹೇಳುವ ಸಾಧ್ವಿ ಇನ್ನಿಬ್ಬರು ಹೆಂಗಸರ ಹೆಗಲ ಮೇಲೆ ಕೈಹಾಕಿಕೊಂಡು ಈಚೆ ಬಂದರು. ಬಿಳೀ ಬಣ್ಣದ ಚೂಡಿ ದಾರ್ ಹಾಕಿ, ತಲೆ ಮೇಲೆ ಸೆರಗು ಹೊದ್ದುಕೊಂಡ ಅವರು ಪಂಜಾಬಿನವರು ಇರಬೇಕು ಎಂದುಕೊಂಡೆ. ರಾವ್ ಅವರು ಎದ್ದು ಹೋಗಿ ಅವರ ಹತ್ತಿರ ಮಾತಾಡಿ ಬಂದರು. ಆ ಸಾಧ್ವಿ ಅವರು ನನ್ನನ್ನು ನೋಡಲು ಈ ಕಡೆ ತಿರುಗಿದರು. ಆಗ ನನಗೆ ಯಾರೋ ಸಂತೆಯಲ್ಲಿ ನಿಲ್ಲಿಸಿ ಕಪಾಳಕ್ಕೆ ಹೊಡೆದಂತೆ ಶಾಕ್ ಆಯಿತು. ಹರಿದ್ವಾರದ ಚಳಿಯಲ್ಲೂ ಬೆವರು ಕಿತ್ತು ಬಂತು. ಯಾಕೆಂದರೆ ನಾನು ಯಾರನ್ನು ಸಾಧ್ವಿ ಎಂದು ತಿಳಿದು ಕೊಂಡಿದ್ದೇನೋ ಅವರೇ ಬಾಬಾ! “ನಮ್ಮ ಡ್ರೆಸ್ ನೋಡಿ ಗಾಬರಿಯಾಗಿದ್ದೀರಾ? ಆ ದೆಹಲಿ ಪೊಲೀಸರು ನಮ್ಮನ್ನು ರಾತ್ರಿ ಎಬ್ಬಿಸಲು ಬಂದಾಗ ಈ ಡ್ರೆಸ್ ನಿಂದಾಗಿ ಅರ್ಧ ಬಚಾವ್ ಆದೆವು. ಅದಕ್ಕೇ ಇದನ್ನು ಹಾಕಿಕೊಂಡು ಅಭ್ಯಾಸ ಮಾಡುತ್ತಿದ್ದೇವೆ. ಮತ್ತೆ ಯಾವಾಗಲಾದರೂ ದೆಹಲಿಗೆ ಹೋದರೆ ಬೇಕಾದೀತು. ಇನ್ನು ಶಿವ ಅರ್ಧನಾರೀಶ್ವರ ಆದದ್ದು ಹೇಗೆ? ಅದನ್ನು ತಿಳಿಯಲು ತಪಸ್ಸು ಮಾಡೋದಾದರೆ ಅದಕ್ಕೆ ಬೇಕಾದ ಡ್ರೆಸ್ ಹಾಕದಿದ್ದರೆ ಹೇಗೆ” ಎಂದರು.
ಅವರ ಪೀಎ ಮರುದಿನಕ್ಕೆ ಸಂದರ್ಶನ ನಿಗದಿಗೊಳಿಸಿದರು. ಅವರ ಭೇಟಿಗೆ ಹೊರಡುವ ಮೊದಲು ಅವರ ಬಗ್ಗೆ ಓದಬೇಕು ಎಂದು ಕೂತೆ. ಈ ‘ಬಾಬಾ’ ರಾಮದೇವ್ ಹೆಸರು ರಾಮಕಿಷನ್ ಯಾದವ್ ಅಂತ. ಹರಿದ್ವಾರದ ಹತ್ತಿರದ ಹಳ್ಳಿಯ ಬಡ ರೈತನ ಮಗನಾದ ಅವರು ಎಂಟನೇ ಈಯತ್ತೆಗಿಂತ ಮುಂದೆ ಓದಲಿಲ್ಲ. ಅವರೇ ಹೇಳುವಂತೆ ಅವರಿಗೆ ೧೫ ವರ್ಷದವರಿದ್ದಾಗ ಅವರ ಮನೆಗೆ ಒಬ್ಬ ವೈರಾಗಿ ಬಂದ. ಅಂಥವರನ್ನು ಉತ್ತರ ಭಾರತದವರು ‘ಬೈರಾಗಿ’ ಅಂತ ಕರೀತಾರೆ. (ಅದೇ ಉಚ್ಛಾರವೇ ಕರೆಕ್ಟು. ತುಮ್ ಬಿಸ್ವಾಸ್ ನಹಿ ಕರೋಗೆ!). ಅವನು “ನೀನು ನನ್ನ ಜೊತೆ ಬರ್ತೀಯಾ. ನಾಳೆಯಾದರೂ ಬರ್ತೀಯಾ ಅಥವಾ ಇನ್ನು ಇಪ್ಪತ್ತು ವರ್ಷವಾದರೂ ಬರ್ತೀಯಾ,” ಅಂತ ಅಂದು ಅವರ ತಲೆ ಮೇಲೆ ಕೈಇಟ್ಟ.
ಅವರು ಮರುದಿನ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿ, ಯಾವ ಟೀಸಿ ಕೈಗೂ ಸಿಗದೇ ಹಿಮಾಲಯ ತಲುಪಿದರು. ಅಲ್ಲಿ ಅವರಿಗೆ ಆ ಬೈರಾಗಿ ಸಿಕ್ಕನೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಯೋಗ ಕಲಿತರು. ತಮಗೆ ೩೨ ವರ್ಷವಾದಾಗ ಹರಿದ್ವಾರಕ್ಕೆ ಬಂದರು. ಶಾಲೆ ಕಾಲೇಜುಗಳಲ್ಲಿ ಯೋಗ ಶಿಬಿರ ಏರ್ಪಡಿಸತೊಡಗಿದರು. ಹಿಮಾಲಯದಲ್ಲಿ ಕಲಿತ ಆರ್ಯುವೇದ ಔಷಧಿ ಪ್ರಯೋಗಗಳನ್ನೂ ಮಾಡಿದರು. ಈ ರೀತಿಯ ಶಿಬಿರಗಳು ಸಾರ್ವಜನಿಕರಿಗೂ ಆರಂಭವಾದವು. ಅವು ಹರಿದ್ವಾರ ಬಿಟ್ಟು ಹೊರಗೂ ನಡೆದವು. ಅಷ್ಟರಲ್ಲಿ ಒಮ್ಮೆ ಅವರಿಗೆ ಬೆಲ್ಸ್ ಪಾಲ್ಸಿ ರೋಗ ಬಂತು. ಅವರ ಮುಖಕ್ಕೆ ಲಕ್ವ ಹೊಡೆಯಿತು. ಅದು ಬಹುಮಟ್ಟಿಗೆ ಗುಣವಾಯಿತಾದರೂ ಅವರ ಅರಿವಿಲ್ಲದೇ ಒಂದು ಕಣ್ಣು ಮಿಟುಕಿಸುವ ಲಕ್ಷಣ ಮಾತ್ರ ಉಳಿದುಕೊಂಡಿತು.
ಇನ್ನು ಅವರ ನೂರಾರು ಯೋಗ ಕ್ಯಾಂಪುಗಳಲ್ಲಿ ಸಾವಿರಾರು ಜನ ಭಾಗವಹಿಸತೊಡಗಿದರು. ಅವರಲ್ಲಿ ಅನೇಕರು ಖುಷಿಯಿಂದ ಇವರ ಆಶ್ರಮಕ್ಕೆ ದಾನ ಮಾಡಿದರು. ಒಮ್ಮೆ ಅವರಿಂದ ಗುಣವಾದ ಜಮೀನುದಾರನೊಬ್ಬ ಅವರಿಗೆ ದೊಡ್ಡ ಜಮೀನು ದಾನ ಮಾಡಿದ.
ಉತ್ತರಾಖಂಡ ಸರಕಾರದ ಮಂತ್ರಿಗಳಲ್ಲೊಬ್ಬ ಅವರಿಗೆ ಆರ್ಯುವೇದ ಔಷಧಿಯ ಕಾರ್ಖಾನೆ ತೆರೆಯಲು ಅನುಕೂಲ ಮಾಡಿಕೊಟ್ಟರು.
ಅಷ್ಟರಲ್ಲಿ ಖಾಸಗಿ ಟಿವಿ ಚಾನೆಲ್ ತೆರೆಯಲು ಮುಕ್ತ ಅವಕಾಶ ನೀಡುವ ಕಾಯಿದೆ ಜಾರಿಗೆ ಬಂದಿದ್ದರಿಂದ ಧಾರ್ಮಿಕ ಚಾನೆಲ್ಗಳು ಶುರುವಾದವು. ಮೊದಲಿಗೆ ಇತರ ಚಾನೆಲ್ಗಳಲ್ಲಿ ಮಾತ್ರ ಯೋಗ ಶಿಬಿರ ಬಿತ್ತರಿಸಲಾಗುತ್ತಿತ್ತು. “ನಾವು ಯಾಕೆ ಇತರರ ಮರ್ಜಿಗೆ ಬೀಳಬೇಕು” ಎಂದು ಬಾಬಾ ಅವರು ತಮ್ಮದೇ ಕಂಪನಿ ತೆಗೆದರು. ಇತರ ಚಾನೆಲ್ಗಳಿಗೆ ಕಂಟೆಂಟ್ (ಯೋಗ ಶಿಬಿರದ ಚಿತ್ರೀಕರಣದ ವಿಡಿಯೋಗಳು) ಮಾರಾಟ ಮಾಡಲು ಶುರು ಮಾಡಿದರು.
ಭಾರತೀಯರು ಮೈಮುರಿದು ದುಡಿಯುವುದನ್ನು ಕಡಿಮೆ ಮಾಡಿದ ಮೇಲೆ ಅವರಲ್ಲಿ ಆರ್ಥರೈಟಿಸ್, ಯಾಸಿಡಿಟಿ, ಡಯಾಬಿಟಿಸ್ ಹೆಚ್ಚಾಯಿತು. ಸಕ್ಕರೆ ತಿನ್ನಬೇಡಿ ಎಂದು ಹೇಳುವ ಡಾಕ್ಟರಿಗಿಂತ ಜೇನುತುಪ್ಪ ತಿನ್ನಿ ಎಂದು ಹೇಳುವ ಡಾಕ್ಟರು ನಮಗೆ ಇಷ್ಟವಾಗತೊಡಗಿದರು. ಅಲೋಪಥಿ ಡಾಕ್ಟರನ್ನು ಬೈಯ್ಯುವ, ಆಯುರ್ವೇದದಿಂದ ಎಲ್ಲವನ್ನೂ ಗುಣಪಡಿಸಬಹುದು, ಮನೆಯ ಸುತ್ತ ಕುಂಬಳಕಾಯಿ (ಲೋಕಿ) ಬೆಳೆಯಿರಿ, ನೀವೇ ಸ್ವಂತ ಆಯುರ್ವೇದ ಡಾಕ್ಟರ್ ಆಗಿ ಎಂದು ಹೇಳುವ ಬಾಬಾ ಎಲ್ಲರಿಗೂ ಪ್ರಿಯವಾಗತೊಡಗಿದರು.
ಅವರ ಭಕ್ತರು, ಭಕ್ತರ ಕಿಸೆಯಲ್ಲಿನ ರೊಕ್ಕ ಹೆಚ್ಚಾದಂತೆ ಹರಿದ್ವಾರದಲ್ಲಿ ಒಂದು ಯೋಗ, ಆಯುರ್ವೇದ ಯುನಿವರ್ಸಿಟಿ ಬಂತು. ಕೇಂದ್ರ ಸರಕಾರದ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಅದಕ್ಕೆ ಆಡಳಿತಾಧಿಕಾರಿಯಾಗಿ ಬಂದರು. ಉತ್ತರ ಪ್ರದೇಶದ ವಿಶ್ವವಿದ್ಯಾಲಯದ ಮಾಜಿ ವೀಸಿಯೊಬ್ಬರು ಅದಕ್ಕೆ ವೀಸಿಯಾಗಿ ನಿಂತರು.
ಅಮೆರಿಕದ ಎನ್ನಾರಾಯಿಗಳೊಬ್ಬರು ಬಾಬಾರಿಗೆ ಕ್ಯಾಲಿಫೋರ್ನಿಯಾದಲ್ಲಿ ೧೦೦ ಎಕರೆ ಜಮೀನು ದಾನ ಮಾಡಿದರು. ಅವರೊಂದಿಗೆ ಸ್ಪರ್ಧೆಗೆ ಬಿದ್ದ ಲಂಡನ್ನಿನ ಗುಜರಾತಿ ಭಕ್ತರು ಯಾರೋ ಬಾಬಾರಿಗೆ ಸ್ಕಾಟ್ಲ್ಯಾಂಡಿನಲ್ಲಿ ಒಂದು ದ್ವೀಪವನ್ನೇ ದಾನ ಮಾಡಿದರು. ಈ ಎರಡೂ ಕಡೆಗಳಲ್ಲಿ ಯೋಗಾ ಸೆಂಟರ್ ಮಾಡುವುದಾಗಿ ಬಾಬಾ ಹೇಳಿದ್ದಾರೆ.
ನಮ್ಮ ಹಾವೇರಿ, ಸವಣೂರುಗಳಷ್ಟು ಸಣ್ಣದಾದ, ಯಾತ್ರೆಗೆ ಬರುವ ಧಾರ್ಮಿಕರಿಂದಾಗಿಯೇ ನಡೆಯುತ್ತಿದ್ದ ಹರಿದ್ವಾರ ಈಗ ಬದಲಾಗಿದೆ. ಬಾಬಾ ಅವರ ಹೆಸರು ದೊಡ್ಡ ಬ್ರ್ಯಾಂಡ್ ಆಗಿ ಪರಿಣಮಿಸಿದೆ. ಅವರ ಔಷಧಿಯ ಕಾರ್ಖಾನೆ ನಡೆಸಲು ಅಮೆರಿಕದಲ್ಲಿ ಎಂಬಿಎ ಕಲಿತು ಬಂದ ಯುವಕರ ಸೈನ್ಯವೇ ಇದೆ. ಅವರ ಯೋಗ ಶಿಬಿರ, ಆಯುರ್ವೇದ ಆಸ್ಪತ್ರೆ ಎಲ್ಲ ದೊಡ್ಡ ಉದ್ದಿಮೆಗಳಾಗಿವೆ.
ಬಾಬಾ ಅವರು ಇರುವ ಮನೆ ಅರಮನೆಯಂತೆ ಇದೆ. ಹರಿದ್ವಾರದ ಚಳಿಯಲ್ಲೂ ಅವರನ್ನು ತಂಪಾಗಿ ಇಡಲು ಹೆವಿ ಡ್ಯೂಟಿ ಏಸಿಗಳು ೨೪ ತಾಸು ಕೆಲಸ ಮಾಡುತ್ತಿವೆ.
ಇನ್ನು ದೇಶದ ಇತರ ಸ್ವಾಮಿಗಳು ಹೊಟ್ಟೆಕಿಚ್ಚು ಪಡುವಷ್ಟು ಸ್ವಯಂಸೇವಕರಿದ್ದಾರೆ. ಅವರ ಸೇವೆಯಲ್ಲಿಯೇ ಪ್ರಾಮಾಣಿಕ ಖುಷಿ ಕಾಣುವ ಯುವಕ-ಯುವತಿ, ಮುದುಕ-ಮುದುಕಿಯರ ದಂಡೇ ಇದೆ.
ಇವರೆಲ್ಲ ಬಾಬಾ ಅವರ ಸೇವೆಗಾಗಿ ತುಂಬಿದ ಕುಟುಂಬ, ದೊಡ್ಡ ಸಂಬಳದ ಕೆಲಸ ಎಲ್ಲ ಬಿಟ್ಟು ಬಂದವರು, ಇಷ್ಟೆಲ್ಲಾ ಪಡೆದವರು ಇನ್ನೇನು ಸಾಧಿಸಲು ದೆಹಲಿಗೆ ಹೋಗಿ ಊಟ ಬಿಟ್ಟರು? ತಮ್ಮ ೪೬ ನೇ ವಯಸ್ಸಿನಲ್ಲಿ ಅವರನ್ನು ಯಾವ ಮನಮೋಹನ ಮುರಳಿ ಕರೆಯಿತು? ಅದನ್ನೆಲ್ಲ ಅವರನ್ನು ಭೇಟಿಯಾದಾಗ ಕೇಳಬೇಕು ಎಂದುಕೊಂಡೆ. ಮರುದಿನ ತಮ್ಮ ಕೇಸರಿ ಟ್ರ್ಯಾಕ್ ಸೂಟಿನಲ್ಲಿ ಸಿಕ್ಕರು. ನೋಡಿ, ಇದೆಲ್ಲಾ ತುಂಬಾ ಸಿಂಪಲ್. ಈಗ ಅಣ್ಣಾ ಅವರು ಉಪವಾಸ ಮಾಡಿಹೋದಮೇಲೆ ದೆಹಲಿಯ ಆ ಜಾಗ ಬಿಕೋ
“ನೋಡಿ ನಮ್ಮ ದೇಶದ ಹಣ- ಕಪ್ಪೋ, ಬಿಳಿಯೋ -ನಮ್ಮಲ್ಲಿಯೇ ಇರಬೇಕು. ಆ ವಿದೇಶಿ ಬ್ಯಾಂಕಿನಲ್ಲಿ ಕಪ್ಪು ಹಣ ಏಕೆ ಇಡಬೇಕು? ನಾವಿಲ್ಲವೇ? ನಮ್ಮಂಥ ನೂರಾರು, ಸಾವಿರಾರು ಆಶ್ರಮಗಳಿಲ್ಲವೇ? ಭಕ್ತರು ಪ್ರೀತಿಯಿಂದ ದಾನ ಕೊಟ್ಟರೆ ನಾವು ಬೇಡ ಎನ್ನುತ್ತೇವೆಯೇ? ಸ್ವಿಜರ್ ಲ್ಯಾಂಡಿನವರು ನಮಗಿಂತ ಬೆಳ್ಳಗೆ ಇದ್ದಾರೆ ಅಂದ ಮಾತ್ರಕ್ಕೆ ಜಗತ್ತಿನ ಕಪ್ಪು ಹಣವೆಲ್ಲ ಅವರಿಗೇ ಸೇರಬೇಕೆ? ಇದು ವರ್ಣಭೇದವಲ್ಲದಿದ್ದರೆ ಇನ್ಯಾವುದು?” ಅಂದರು. ಅಚ್ಛಾ, ಠೀಕ ಹೈ ಅಂದೆ.
“ಇನ್ನು ಸಾವಿರ, ಐನೂರು ರೂಪಾಯಿಯ ನೋಟು ಬ್ಯಾನ್ ಮಾಡಿ ಅಂತ ಹೇಳಿದ್ದೇವೆ. ಅದು ಕೇವಲ ಅರ್ಧ ಡಿಮಾಂಡ್ ಅಷ್ಟೇ. ನಿಜವಾಗಿ ಹೇಳಬೇಕೆಂದರೆ ಕರೆನ್ಸಿ ನೋಟನ್ನೇ ಬ್ಯಾನ್ ಮಾಡಬೇಕು. ನಮ್ಮ ಸಾಯಿಬಾಬಾ ಅವರು ಕೇವಲ ಬಂಗಾರದ ಗಟ್ಟಿಗಳಿಂದಲೆ ಪ್ರಪಂಚದ ವ್ಯವಹಾರ ಮುಗಿಸಲಿಲ್ಲವೇ?” ಅಂದರು. ಠೀಕ ಹೈ, ಠೀಕ ಹೈ ಅಂದೆ.
“ಇನ್ನು ಪ್ರಧಾನ ಮಂತ್ರಿ, ನ್ಯಾಯಾಧೀಶರು, ಅವರು ಇವರು ಎಲ್ಲರೂ ಲೋಕಪಾಲ್ ವ್ಯಾಪ್ತಿಗೆ ಬರಬೇಕು ಅಂದೆವು. ಸ್ವಾಮೀಜಿಗಳು, ಬಾಬಾಗಳು, ಮುಲ್ಲಾಗಳು, ಪಾದ್ರಿಗಳು ಬರಬೇಕು ಅಂತ ಅಂದೆವಾ? ಇಲ್ಲ. ಇದನ್ನು ನಮ್ಮನ್ನು ಟೀಕಿಸುತ್ತಿರುವ ಧರ್ಮಗುರುಗಳು ತಿಳಿದುಕೊಳ್ಳಬೇಕು” ಅಂತ ಅಂದರು. ಇದೂ ಕೂಡ ಠೀಕ ಹೈ ಬಿಡಿ, ಅಂದೆ.
“ಕೊನೆಯದಾಗಿ ಈ ದೇಶದ ಪ್ರಧಾನ ಮಂತ್ರಿಯನ್ನು ಜನ ನೇರವಾಗಿ ಚುನಾಯಿಸಬೇಕು ಅಂತ ಬೇಡಿಕೆ ಇಟ್ಟೆವು. ಅದು ಯಾಕೆ ಅಂತ ನಿಮ್ಮಂತ ರಾಜಕೀಯ ವರದಿಗಾರಿಕೆ ಮಾಡಿದವರಿಗೆ ಗೊತ್ತಾಗಲ್ವಾ” ಅಂದು ಕಣ್ಣು ಮಿಟಿಕಿಸಿದರು. ಅದು ತಿಳಿಯಲಿಲ್ಲ. ಇನ್ನೊಮ್ಮೆ ಹೇಳಿ ಎಂದೆ. “ಸರಿ ನಿಮಗೆ ರಾಜಕಾರಣದ ಭಾಷೆ ತಿಳಿಯೋದಿಲ್ಲ ಅನ್ನಿಸುತ್ತದೆ, ಧರ್ಮದ ಭಾಷೆಯಲ್ಲಿ ಹೇಳ್ತೇನೆ,” ಅಂತ ಶುರು ಮಾಡಿದರು.
“ಅಲ್ಲರೀ ಮನಮೋಹನ ಸಿಂಗ್ಗೆ ಎಂಬತ್ತಾಗುತ್ತಾ ಬಂತು. ಸೋನಿಯಾ ಗಾಂಧಿ ಪ್ರಧಾನಿ ಆಗಲ್ಲ. ರಾಹುಲ್ ಕೈಲಾಗಲ್ಲ. ಪ್ರಿಯಾಂಕಾ ಆಗಬೇಕಂದರೆ ವಾಡ್ರಾ ಬಿಡಲ್ಲ. ಇನ್ನು ಬಿಜೆಪಿಯಲ್ಲಿ ಉಳಿದಿರೋರು ಇಬ್ಬರೇ- ನಾತಿನ್ ಯಡಿಯೂರಪ್ಪ, ನೀತಿನ್ ಗಡಕರಿ. ಕುಮಾರಸ್ವಾಮಿ ಪ್ರಧಾನಿ ಅಗೋಕೆ ಹೋದರೆ ದೊಡ್ಡ ಗೌಡರು ನಾನಿನ್ನೂ ಇದ್ದೀನಪ್ಪಾ ಅಂತ ಯಾಂಟಿ ಚೇಂಬರ್ ನಿಂದ ಗುಟುರು ಹಾಕ್ತಾರೆ. ಆ ಎಡರಂಗದವರನ್ನೆಲ್ಲ ಮಮತಾ ದೀದಿ ದುರಂತೋ ಎಕ್ಸ್ಪ್ರೆಸ್ನಲ್ಲಿ ತುಂಬಿ ತ್ರಿಪುರಾಕ್ಕೆ ಪಾರ್ಸಲ್ ಮಾಡಿಬಿಟ್ಟಿದ್ದಾರೆ. ಇನ್ನು ಈ ಭಾರತದಲ್ಲಿ ಉಳಿದ ನಾಯಕರು ಯಾರು? ಯಾರಿಲ್ಲ. ಯದಾ ಯದಾ ಹಿ ಧರ್ಮಸ್ಯ ಅನ್ನೋ ಡಯಲಾಗ್ ನ ಲಾಸ್ಟ್ ಲೈನ್ ಏನಿದೆ? ಸಂಭವಾಮಿ ಯುಗೇ ಯುಗೇ ಅಂತ. ಅಂದರೆ ಧರ್ಮ ಅನ್ನೋದು ಸರಕಾರಿ ಕಾರ್ಖಾನೆಯಂತೆ, ರಿಪೇರಿ ಮಾಡಲಾರದಷ್ಟು ಕೆಟ್ಟು ಹೋದಾಗ ದೇವರು ಮತ್ತೆ ಮತ್ತೆ ಸೆಕೆಂಡ್ ಫ್ಲೋರ್ ನಿಂದ ಕೆಳಗೆ ಇಳಿಯುತ್ತಾನೆ ಅಂತ ಅರ್ಥ. ದೇವರೇನು ರಾಜಕಾರಣಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾನಾ? ಇಲ್ಲ. ಅವನು ಸ್ವಾಮೀಜಿ, ಬಾಬಾಗಳ ರೂಪದಲ್ಲೇ ಪ್ರಕಟವಾಗೋದು. ಇಂಥವರು ಪ್ರಧಾನಿ ಆಗಬೇಕಾದರೆ, ಪಾರ್ಟಿ, ಟಿಕೆಟ್ಟೂ, ಹೈಕಮಾಂಡು ಅಂತ ಕೂರಕ್ಕಾಗತ್ತಾ, ನಮಗಿರೋ ಜನಪ್ರಿಯತೆಗೆ ಜನ ನಮ್ಮನ್ನು ಡೈರೆಕ್ಟ್ ಆಗಿ ಆರಿಸಬೇಕಪ್ಪಾ” ಅಂತ ಇಲ್ಲದ ಕಾಲರ್ ಅನ್ನು ಕುಣಿಸಿದರು. ಆಗ ಅವರೇನು ಹೇಳಲು ಇಷ್ಟೊತ್ತೂ ಪ್ರಯತ್ನ ಮಾಡುತ್ತಿದ್ದರೋ ಅದು ನನಗೆ ತಿಳಿಯಲು ಆರಂಭಿಸಿತು. ನನ್ನ ಮನಸ್ಸಿನ ಅಂಧಕಾರದ ಪೊರೆ ಹರಿದು ಜ್ಞಾನದ ಬೆಳಕು ಮೂಡಲಾರಂಭಿಸಿತು.
ಆ ನಂತರ ಅವರು ಐದು ದಿನ ಉಪವಾಸಕ್ಕೆ ಕೂತರು. ಆವಾಗ ಏನಾಯಿತು ಅಂತ ಎಲ್ಲರಿಗೂ ಗೊತ್ತಿದೆ.
ಅವರು ಆಸ್ಪತ್ರೆ ಐಸಿಯೂದಲ್ಲಿ ಇದ್ದಾಗ ‘ಕ್ಯಾನ್ ಐ ಸಿ ಯೂ’ ಅಂತ ಎಸ್ಎಂಎಸ್ ಕಳಿಸಿದರು. ಹೋದೆ. “ಅಯ್ಯೋ ಇದೆಲ್ಲ ನರಕ ಕಣ್ರೀ” ಅಂದರು. “ನಾವು ಬಾಡಿ ಬಿಲ್ಡಿಂಗ್ ಮಾಡಿ ರೂಢಿ ಇದ್ದವರು. ಉಪವಾಸ ವನವಾಸ ಎಲ್ಲ ನಮಗೆ ಬೇಕಾಗಿಲ್ಲ. ನಾವು ಉಪವಾಸ ಕೂತ ಐದನೇ ದಿನಕ್ಕೇ ಸಲೈನ್ ಹಚ್ಚುವ ಪರಿಸ್ಥಿತಿ ಬಂತು. ಇದು ಯಾವಾನು ಹೇಳಿದ್ದಾನು? ಇದೆಲ್ಲಾ ಆ ಗಾಂಧಿ, ಅಣ್ಣಾ ಹಜಾರೇಗೆ ಸರಿ, ನಾವು ಯೋಗ್ ಮಾಡ್ತಾ ಗೋಡಂಬಿ, ಪಿಸ್ತಾ ತಿನ್ನುತ್ತಾ ಇರೋಣ, ಲೋಕೀ ಜ್ಯೂಸ್ ಕುಡಿಯುತ್ತಾ ಹೈ-ಲೆವಲ್ ಭಕ್ತರ ನಡುವೆ ಓಡಾಡೋಣ” ಅಂತ ಅಂದರು. ಬ್ರಾಜಿಲ್ ಗೆ ಪ್ರಯಾಣ ಬೆಳೆಸಲು ತಮ್ಮ ಖಾಸಗಿ ವಿಮಾನ ಹತ್ತಿದರು. ಅದನ್ನು ನೋಡಿ ನಾವು ರೇಲ್ವೇ ಸ್ಟೇಷನ್ ಗೆ ಹೋಗಲು ನಾವು ಜಟಕಾ ಹತ್ತಿದೆವು.
ಅದು ದೆವ್ವ ಅಡ್ಡಾಡುವ ಸಮಯ. ಅಂದರೆ ಮಧ್ಯರಾತ್ರಿಯ ನಂತರದ ಹೊತ್ತು. ನಾನು ಕಂಪ್ಯೂಟರ್ ಮುಚ್ಚಿ ಕಚೇರಿಗೆ ಕೀಲಿ ಹಾಕಿ ಹೊರ ಬಂದಾಗ ಒಳಗೆ ಫೋನ್ ಹೊಡಕೊಳ್ಳತೊಡಗಿತು. ಕಚೇರಿ ಕೆಲಸ ಮುಗಿದ ಮೇಲೆಯೇ ಅತ್ಯಂತ ಮುಖ್ಯ ಟೆಲಿಫೋನು ಬರುವ ಆಫೀಸುಗಳಿಗೆ ಪ್ಯೂವರ್ ಕನ್ನಡದಲ್ಲಿ ಪತ್ರಿಕಾ ಕಚೇರಿ ಎಂದು ಹೆಸರು.
ಮತ್ತೆ ವಾಪಸ್ ಷಟರ್ ಎತ್ತಿ, ಫೋನೆತ್ತಿ, ದನಿ ಎತ್ತಿ ಹಲೋ ಎಂದಾಗ ಅತ್ಲಾ ಕಡಿಂದ ಮಾತಾಡಿದವರು ಕೆಂಡಸಂಪಿಗೆ ಸಂಪಾದಕರು.
ಹೌದು ಎನ್ನುವವನನ್ನು ಜಗತ್ತಿನಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲವಂತೆ. ಅದು ನಮ್ಮ ವೃತ್ತಿಯಲ್ಲಿ ದಿನಾಲೂ ನಿಜವಾಗುತ್ತಾ ಹೋಗುತ್ತದೆ. ಅಲ್ಲರೀ ಆ ಬಾಬಾ ರಾಮದೇವ್ ಬಗ್ಗೆ ನೀವು ಬರೀಬಾರದೇ, ಇಷ್ಟೊಂದು ಸಂಬಳ ತೊಗೋತೀರಿ. ಇನ್ನು ವೇಜ್ ಬೋರ್ಡ್ ಬೇರೆ ಬರೋದಿದೆ. ಅವಾಗ ನಿಮಗೆಲ್ಲ ಯೂಜಿಸಿ ಲೆವಲ್ ಸಂಬಳ ಬರುತ್ತದೆ. ಈಗಲೇ ಕೆಲಸ ಮಾಡದ ನೀವು ಆಗ ಮಾಡ್ತೀರಾ?ನಮಗೆ ಮುಫತ್ತಾಗಿ ಬರೆದುಕೊಡಿ’ ಅಂತ ಬಾಬಾ ರಾಮದೇವ್ ಸ್ಟೈಲಿನಲ್ಲಿ ಅರ್ಧ ತಾಸು ಉಸಿರು ನಿಲ್ಲಿಸದೇ ಬೈದರು.
“ಸಾರ್ ಸಾರ್ ಒಂದ್ನಿಮಿಷ ಸಾರ್. ನಾನ್ ಆಗಲೇ ಆ ಸ್ಟೋರಿ ಕಳಿಸಿ ಆಯಿತು,” ಅಂತಂದೆ. ಹೌದಾ, ಯಾವಾಗ?, ನಾನ್ ನೋಡ್ಲೇ ಇಲ್ಲಾ ಅಂತ ಇಟ್ಟರು. ಅವರು ಉಳಿದುಕೊಂಡರು, ನಾನೂ ಉಳಿದುಕೊಂಡೆ.
0 Comments