ಬೆಂಗಳೂರೆಂಬೋ ಓಯಸಿಸ್ಸಿನ ಮಂದಿಗೆ ಒಂದು ಒಲವಿನೋಲೆ
ಫೆಬ್ರವರಿ ೫, ೬ ೭ ಕ್ಕೆ ಗುಲಬರ್ಗಾ ದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಇದು ಹೂವು- ಬಳ್ಳಿಯ ನಾಡು (ಗುಲಾಬ್ -ಅರ್ಗ್). ಇಲ್ಲಿಗೆ ತಮಗೆ ಸ್ವಾಗತ.
ಈ ಸಂಭ್ರಮದ ಜಾತ್ರೆಗೆ ಬಂದಿರೋ, ನಮ್ಮ ಸಂತೋಷದಲ್ಲಿ ಭಾಗಿಯಾಗಿ.
ಆದರೆ ಇದರ ವರದಿ ಮಾಡಲು ಬರೋದಾದರೆ ನಿಮ್ಮಲ್ಲಿ ಒಂದು ಮನವಿ.
ಈ ಸಂಭ್ರಮದ ಜಾತ್ರೆಗೆ ಬಂದಿರೋ, ನಮ್ಮ ಸಂತೋಷದಲ್ಲಿ ಭಾಗಿಯಾಗಿ.
ಆದರೆ ಇದರ ವರದಿ ಮಾಡಲು ಬರೋದಾದರೆ ನಿಮ್ಮಲ್ಲಿ ಒಂದು ಮನವಿ.
ಇಲ್ಲಿಗೆ ಬಂದಿಳಿದ ಮೊದಲನೇಯ ದಿನವೇ -ʻʻಇಲ್ಲಿ ಎತ್ತ ನೋಡಿದಲ್ಲಿ ʻಧೂಳು- ಕಸ-ಅವ್ಯವಸ್ಥೆʼʼʼ ಎನ್ನುವ ಸಿದ್ಧ ಹೆಡಲೈನಿನ ಸುದ್ದಿ ಬರೆಯಬೇಡಿ. ಬೆಂಗಳೂರಿನ ʻಧೂಳು- ಕಸ-ಅವ್ಯವಸ್ಥೆʼ ಯ ಬಗ್ಗೆಯೂ ನೀವು ಸುದ್ದಿ ಮಾಡಬಹುದು. ವಾಪಸು ಹೋದ ಮೇಲೆ.
ʻಇದೇನಿದು ಚಳಿಗಾಲದಲ್ಲೂ ಭಾರೀ ಬಿಸಿಲುʼ, ʻಬಿಸಿಲ ನಾಡುʼ, ʻಸೂರ್ಯ ನಗರಿʼ ಅಂತ ನಿಮ್ಮ ಕಾಪಿ ಶುರು ಮಾಡಬೇಡಿ. ಇದು ಭಾರಿ ಬಿಸಿಲೇನಲ್ಲ. ರಾಜಸ್ತಾನದ ಫಾಲೋದಿಯಲ್ಲಿ ೫೩ ಡಿಗ್ರಿ ತಾಪಮಾನ ಇರುತ್ತದೆ. ರಾಮಗುಂಡಂ- ಸಿಂಗರೇನಿಯಲ್ಲಿ ೫೨ ಇರುತ್ತದೆ. ಗುಜರಾತಿನ ಅನೇಕ ನಗರಗಳು ೪೨ ಕ್ಕಿಂತ ಹೆಚ್ಚು ಬಿಸಿ ಇರುತ್ತದೆ. ನಾಗಪುರ ದಲ್ಲಿ ೪೨ ಸರ್ವೇ ಸಾಮಾನ್ಯ. ಅಬು ಧಾಬಿಯಲ್ಲಿ ೪೮, ಸೌದಿ ಅರೇಬಿಯಾದಲ್ಲಿ ೪೭ ಮುಟ್ಟುತ್ತದೆ. ಗಲ್ಫ್ ದೇಶಗಳಲ್ಲಿ ವರ್ಷವಿಡೀ ೪೦ ರಿಂದ ೫೦ ರ ನಡುವೆ ಅಲೆದಾಡುತ್ತಿರುತ್ತದೆ.
ಇಂಥ ಕಡೆಗಳಲ್ಲಿ ತಾವು ಕ್ರಿಕೆಟ್ಟೋ, ಕಂಪನಿಯದೋ ಸುದ್ದಿ ಮಾಡಲು ಹೋದಾಗ ಕಿರಿಕಿರಿ ಮಾಡಿಕೊಳ್ಳದೇ ಕೆಲಸ ಮಾಡಿದಂತೆಯೇ ಇಲ್ಲಿಯೂ ಮಾಡಿ.
ಅಪರೂಪಕ್ಕೆ ಸ್ನೇಹಿತರು, ಅಥವಾ ಅತೀ ಅಪರೂಪಕ್ಕೆ ಕುಟುಂಬದ ಜೊತೆ ಪಿಕ್ನಿಕ್ಕಿಗೆ ಹೋದಾಗ ತಾಪಮಾನ ಮರೆತು ಖುಷಿ ಪಡುವಂತೆ ಈಗಲೂ ಇರಿ. ಸಮ್ಮೇಳನದ ಮುಖ್ಯ ಉದ್ದೇಶದ ಬಗ್ಗೆ ಬರೆಯಿರಿ. ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳಬೇಡಿ.
ಇಂಥ ಕಡೆಗಳಲ್ಲಿ ತಾವು ಕ್ರಿಕೆಟ್ಟೋ, ಕಂಪನಿಯದೋ ಸುದ್ದಿ ಮಾಡಲು ಹೋದಾಗ ಕಿರಿಕಿರಿ ಮಾಡಿಕೊಳ್ಳದೇ ಕೆಲಸ ಮಾಡಿದಂತೆಯೇ ಇಲ್ಲಿಯೂ ಮಾಡಿ.
ಅಪರೂಪಕ್ಕೆ ಸ್ನೇಹಿತರು, ಅಥವಾ ಅತೀ ಅಪರೂಪಕ್ಕೆ ಕುಟುಂಬದ ಜೊತೆ ಪಿಕ್ನಿಕ್ಕಿಗೆ ಹೋದಾಗ ತಾಪಮಾನ ಮರೆತು ಖುಷಿ ಪಡುವಂತೆ ಈಗಲೂ ಇರಿ. ಸಮ್ಮೇಳನದ ಮುಖ್ಯ ಉದ್ದೇಶದ ಬಗ್ಗೆ ಬರೆಯಿರಿ. ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳಬೇಡಿ.
ಇಂತಹ ಬಿಸಿಲಿನಲ್ಲಿಯೂ ಗುಲಬರ್ಗಾ ನಗರದಲ್ಲಿ ಐದೂವರೆ ಲಕ್ಷ ಜನ ಇದ್ದಾರೆ. ಈ ಜಿಲ್ಲೆಯಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ಅವರೂ ಕೇವಲ ಮನುಷ್ಯರು, ಚಳಿ- ಬಿಸಿಲು ಗಳು ಅವರಿಗೂ ತಗಲುತ್ತವೆ. ಆದರೂ ಅವರು ಹೊಂದಿಕೊಂಡು ಬಾಳುತ್ತಿದ್ದಾರೆ. ಈ ಭಾವನೆ ನಿಮ್ಮಲ್ಲಿ ಇರಲಿ.
ʻಇಲ್ಲೇನು ಇವರೆಲ್ಲ ಉರ್ದು ಮಾತಾಡುತ್ತಾರೆ, ವಿಚಿತ್ರʼ ಅಂತ ಮ್ಮನಿಮ್ಮಲ್ಲೇ ಮಾತಾಡಿಕೊಳ್ಳಬೇಡಿ. ಬೆಂಗಳೂರಿಗರಷ್ಟು ಉರ್ದು ಮಾತಾಡುವವರು ಬೇರೆ ಯಾರೂ ಇಲ್ಲ. ನೀವು ʻಪರವಾಗಿಲ್ಲʼ ಎಂದಾಗ, ʻಸಖತ್ ಖುಷಿ ಮಗಾʼ ಅಂದಾಗ, ʻಮಸ್ತ್ ಮಜಾ ಮಾಡಿʼ ಅಂದಾಗ, ʻಸರಕಾರಿ ತರಬೇತಿ ಕೇಂದ್ರʼ ಅಂದಾಗ, ʻ ತಿಜೋರಿಯಲ್ಲಿ ಬರೀ ಚಿಲ್ಲರೆ ಕಾಸುʼ ಅಂದಾಗ, ನೀವು ಮಾತಾಡುತ್ತಿರುವುದು- ಉರ್ದು- ಪರ್ಷಿಯನ್ ಭಾಷೆ. ಕೃಷ್ಣ ಕೊಲ್ಹಾರ್ ಕುಲಕರ್ಣಿ ಸರ್ ಹೇಳಿದಂತೆ ಕನ್ನಡಿಗರ ಲಂಗ, ಲುಂಗಿ, ಲಂಗೋಟಿ, ಲಗಾಮು, ಇವು ಯಾವುವೂ ಕನ್ನಡದ್ದಲ್ಲ. ಉರ್ದು- ಪರ್ಷಿಯನ್ ಭಾಷೆಯವು. ಇದು ನಿಮಗೆ ಗೊತ್ತಿರಲಿ. ಕುಲಕರ್ಣಿ ಸರ್ ಬಹುಶೃತ ವಿಧ್ವಾಂಸರು. ಇದೂ ನಿಮಗೆ ಗೊತ್ತಿರಲಿ.
ನಾವು ಮಾತಾಡುವ ರೀತಿ ನೋಡಿ ಕಿಸಕ್ಕನೆ ನಕ್ಕು, ಅಪಹಾಸ್ಯ ಮುಚ್ಚಿಡಲು ʻನಿಂ ಭಾಷೆ ನಮಗೆ ತುಂಬಾ ಇಷ್ಟʼ, ಅಂತ ಓಳು ಕುಟ್ಟಬೇಡಿ. ಅದು ʻನಮ್ ಭಾಷೆʼ ಅಲ್ಲ. ನಮ್ಮ ಶೈಲಿ. ಇದು ನಿಮ್ಮ ʻಪ್ಯೂರ್ʼ ಕನ್ನಡದ ಅಪಭ್ರಂಶ ಅಲ್ಲ. ಅದು ನಾವು ಸಹಜವಾಗಿ ಮಾತಾಡುವ ರೀತಿ. ಅಕೆಡೆಮಿಕ್ ಆಗಿ ಹೇಳುವುದಾದರೆ ಅದು ಕನ್ನಡದ ಉಪಭಾಷೆ. ಇತರ ಭಾಷೆಗಳ ನುಡಿಗಟ್ಟಿನ, ವ್ಯಾಕರಣದ ಪ್ರಭಾವದಿಂದ ಗಡಿ ಜಿಲ್ಲೆಗಳು ತಮ್ಮದೇ ಶೈಲಿ ಬೆಳೆಸಿಕೊಂಡಿರುತ್ತವೆ. ಬೆಂಗಳೂರನಲ್ಲಿ ತೆಲುಗು, ತಮಿಳು, ಕರಾವಳಿಯಲ್ಲಿ, ಬ್ಯಾರಿ, ತುಳು, ಕೊಂಕಣಿ, ನವಾಯತಿ, ಮಲಯಾಳ ಪ್ರಭಾವ ಇರುವುದು ಎಷ್ಟು ಸ್ವಾಭಾವಿಕವೋ ಇದೂ ಅಷ್ಟೇ ಸ್ವಾಭಾವಿಕ. ಬೆಂಗಳೂರು-ಮೈಸೂರು ಕೂಡ ಗಡಿ ಜಿಲ್ಲೆಗಳು. ನಿಮಗೆ ನೆನಪಿರಲಿ.
ʻʻಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಊಟದ ಸವಿʼʼ ಅಂತ ಬರೆಯಬೇಡಿ. ಅದು ಸುದ್ದಿ ಅಲ್ಲ. ನಾವು ಇಲ್ಲಿ ದಕ್ಷಿಣ ಆಫ್ರಿಕಾದ ಊಟ ಕೊಡಲಿಕ್ಕೆ ಆಗೋದಿಲ್ಲ. ದಕ್ಷಿಣ ಕರ್ನಾಟಕದ ಊಟ ಹಾಕಲಿಕ್ಕೂ ಆಗೋದಿಲ್ಲ.
ʻಕಲಬುರಗಿ ನುಡಿ ಹಬ್ಬದಲ್ಲಿ ಭಾರಿ ಅವ್ಯವಸ್ಥೆʼ ʻʻಹೇಳುವವರಿಲ್ಲ, ಕೇಳುವವರಿಲ್ಲʼʼ, ʻʻಅಂಧಾ ದರಬಾರ್ʼʼ ಅಂತೆಲ್ಲಾ ಬರೀಬೇಡಿ. ನೀವು ಹಿಂದೆ ಹೋಗಿದ್ದ ಸಮ್ಮೇಳನಗಳಲ್ಲಿ ನಿಮ್ಮ ಅನುಭವವನ್ನು ಹೋಲಿಸಿ ಬರೆಯುವುದಾದರೆ ಬರೆಯಿರಿ. ಆದರೆ ಆಳ್ವರ ಹಬ್ಬಕ್ಕೆ ಹೋಲಿಸಿ ಬರೆಯಬೇಡಿ. ಅವರಿಗಿರುವ ಸಿರಿ ಪರಿಷತ್ತಿಗೆ ಇಲ್ಲ. ಜಿಲ್ಲಾಧಿಕಾರಿಯಿಂದ ಹಿಡಿದು ಜಿಲ್ಲಾ ಪತ್ರಕರ್ತರ ಸಂಘದವರ ವರೆಗೂ ದೇಣಿಗೆ ಪಡೆದು ಇದನ್ನು ನಡೆಸಲಾಗುತ್ತಿದೆ.
ʻಓಓಡಿ ಚೀಟಿಗೆ ಗದ್ದಲ, ಧಾಂದಲೆ,ʼ ಅಂತೆಲ್ಲಾ ಬರೀಬೇಡಿ. ʻಗೋಷ್ಠಿಗಳು ತಡವಾಗಿ ಆರಂಭವಾಗಿ ತಡವಾಗಿ ಮುಗಿದವುʼ. ʻಶಿಸ್ತು ಇಲ್ಲವೇ ಇಲ್ಲʼ, ʻʻಕವಿಗೋಷ್ಟಿಯಲ್ಲಿ ಕೇಳುಗರೇ ಇಲ್ಲʼʼ ಅಂತ ಬರೀಬೇಡಿ. ಇವು ಯಾವುವೂ ಸುದ್ದಿ ಅಲ್ಲ. ಪ್ರತಿ ಸಮ್ಮೇಳನದಲ್ಲೂ ಆಗುವುದು ಸುದ್ದಿ ಆಗಲು ಸಾಧ್ಯ ವಿಲ್ಲ.
ಅದರ ಬದಲು
ಹೈದರಾಬಾದು ಕರ್ನಾಟಕ ಕಲ್ಯಾಣ ಕರ್ನಾಟಕವಾಗಿದೆಯೇ? ಅದನ್ನು ಖಟ್ಟಿಗೆ ಹಚ್ಚಿ ಪರೀಕ್ಷಿಸಿ. ಇಲ್ಲಿನ ಸಮಸ್ಯೆಗಳೇನು? ಅವಕ್ಕೆ ಪರಿಹಾರಗಳೇನಿರಬಹುದು? ನಿಮ್ಮ ಅನುಭವ ಶ್ರೀಮಂತಿಕೆಯಿಂದ, ಓಡಾಟದ ಹಿನ್ನೆಲೆಯಿಂದ ಪರಿಹಾರೋಪಾಯಗಳನ್ನು ಸೂಚಿಸಿ. ಪರಿಣಿತರನ್ನು ಕೇಳಿ.
ಹೈದರಾಬಾದು ಕರ್ನಾಟಕ ಕಲ್ಯಾಣ ಕರ್ನಾಟಕವಾಗಿದೆಯೇ? ಅದನ್ನು ಖಟ್ಟಿಗೆ ಹಚ್ಚಿ ಪರೀಕ್ಷಿಸಿ. ಇಲ್ಲಿನ ಸಮಸ್ಯೆಗಳೇನು? ಅವಕ್ಕೆ ಪರಿಹಾರಗಳೇನಿರಬಹುದು? ನಿಮ್ಮ ಅನುಭವ ಶ್ರೀಮಂತಿಕೆಯಿಂದ, ಓಡಾಟದ ಹಿನ್ನೆಲೆಯಿಂದ ಪರಿಹಾರೋಪಾಯಗಳನ್ನು ಸೂಚಿಸಿ. ಪರಿಣಿತರನ್ನು ಕೇಳಿ.
ಸಾಹಿತ್ಯ ಬದುಕಿನಿಂದ ಹೊಮ್ಮುವುದು ಹೌದಾದರೆ ಇಲ್ಲಿನ ಸಾಹಿತ್ಯದ ಬಗ್ಗೆ ಬರೆಯುವಾಗ ಇಲ್ಲಿನ ಬದುಕಿನ ಬಗ್ಗೆಯೂ ಬರೆಯಬಹುದು. ತಪ್ಪೇನಿಲ್ಲ. ವಿವಿಧ ರಾಜಕೀಯ ಪಕ್ಷಗಳು ಈ ಪ್ರದೇಶಕ್ಕಾಗಿ ಯಾವ ರೀತಿ ನೀತಿ ರೂಪಿಸಿದವು? ಯಾವ ಕಾರ್ಯಕ್ರಮಗಳನ್ನು ಜಾರಿ ಮಾಡಿದವು? ಅವು ಎಷ್ಟು ಯಶಸ್ಸು ಪಡೆದವು? ಇದರ ಬಗ್ಗೆ ಯೋಚಿಸಿ. ವಸ್ತುನಿಷ್ಠ ವಾಗಿ ಬರೆಯಿರಿ. ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡಿ. ಹೊಸ ಹೊಳಹು ಹರೆಯಲಿ.
ನೀವು ರಾಜ್ಯದ ಇತರ ಭಾಗಗಳ, ಇತರ ರಾಜ್ಯಗಳ, ಇತರ ದೇಶಗಳ ಪ್ರದೇಶಗಳಿಗೆ ಭೇಟಿ ನೀಡಿದಾಗ ಯಾವ ಸಮಸ್ಯೆ ಕಂಡವು? ಅವುಗಳನ್ನು ಅಲ್ಲಿಯ ಸರಕಾರಗಳು ಹೇಗೆ ಪರಿಹರಿಸಿದವು? ಇಲ್ಲಿ ಏನಾಯ್ತು? ಯಾರ ತಪ್ಪಿದೆ? ಯಾವ ತಾಳ ತಪ್ಪಿದೆ? ಇವುಗಳ ಬಗ್ಗೆ ಚಿಂತಿಸಿ. ಅನ್ನಿಸಿದನ್ನು ಬರೆಯಿರಿ. ಇಲ್ಲಿಯ ಖಡಕ್ ರೊಟ್ಟಿ ಉಂಡ ನಂತರ ಇಲ್ಲಿಯವರನ್ನು ಟೀಕಿಸಬಾರದು ಅಂತೇನಿಲ್ಲ.
ಕಲ್ಯಾಣದ ಕರ್ನಾಟಕದ ಮಹಾಮಹೋಪಾಧ್ಯಾಯ ಶಾಂತರಸ ಅವರು ಇಲ್ಲಿನ ಕಲೆ- ಸಾಹಿತ್ಯವನ್ನು ಹಳೇ ಮೈಸೂರಿನವರು ನಿರ್ಲಕ್ಷ ಮಾಡುವುದನ್ನು ಕಂಡು ನೊಂದುಕೊಂಡು ಇಲ್ಲಿನ ಸಂಸ್ಕೃತಿಯನ್ನು ʻಬೆನ್ನ ಹಿಂದಿನ ಬೆಳಕುʼ ಎಂದು ಚಂದಾಗಿ ಕರೆದರು. ಆ ಪರಿಸ್ಥಿತಿ ಇನ್ನೂ ಇದೆಯೇ? ಅದನ್ನು ಅವಲೋಕಿಸಿ. ಇದನ್ನು ಹೇಗೆ ಸರಿಪಡಿಸಬಹುದು ಅನ್ನೋದನ್ನು ಚರ್ಚಿಸಿ. ಕನ್ನಡದ ಹಿರಿ ಸಂಸ್ಕೃತಿ ಕಿರು ಸಂಸ್ಕೃತಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆಯೇ? ವಿಚಾರ ಮಾಡಿ. ಅಂದ ಹಾಗೆ ದಬ್ಬಾಳಿಕೆ ಸಹಿತ ಉರ್ದು- ಪರ್ಷಿಯನ್ ಭಾಷೆಯ ಪದ. ಇರಲಿ.
ಸಾಹಿತಗಳನ್ನಂತೂ ನೀವು ಮೂರು ದಿನದಲ್ಲಿ ಭೇಟಿಯಾಗುತ್ತೀರಿ. ಇಲ್ಲಿನ ಕಲಾವಿದರನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳಬೇಡಿ. ಕಲಬುರಗಿ ಕಲಾವಿದರ ಕಾಶಿ. ಇಲ್ಲಿ ನಾಡೋಜ ಜಿ ಎಸ್ ಖಂಡೇರಾವ್ ಇದ್ದಾರೆ. ಇಳಿ ವಯಸ್ಸಿನಲ್ಲಿಯೂ ಸಕ್ರಿಯವಾಗಿದ್ದಾರೆ ಅವರನ್ನು ನೋಡಿ. ವಿ. ಜಿ ಅಂದಾನಿ ಅವರ ಕಲಾ ಶಾಲೆಗೆ ಭೇಟಿ ಕೊಟ್ಟು ಅವರ ಶಿಷ್ಯ ವೃಂದವನ್ನು ಮಾತಾಡಿಸಿ. ಇಲ್ಲಿನ ಅಭೂತ ಪೂರ್ವ ಕತೃತ್ವಶಕ್ತಿಯ ಕಲಾವಿದ ಎಸ್. ಎಂ ಪಂಡಿತ ಅವರ ಮನೆಯನ್ನು ಆರ್ಟ ಗ್ಯಾಲರಿ ಯಾಗಿಸಲಾಗಿದೆ. ಅದರಲ್ಲಿ ಜಗ ಕಂಡರಿಯದ ಕಲಾಸಿರಿ ಇದೆ. ಮಹಾಭಾರತ-ರಾಮಾಯಣ, ಕಾಳಿ ಮಾತೆ, ಪುರಾಣಗಳ ಸರಣಿಯ ಚಿತ್ರಗಳು, ಇತಿಹಾಸ ಪುರುಷರ ಪೊರ್ಟರೇಟು ಚಿತ್ರಗಳು ಇಲ್ಲಿವೆ. ಅದನ್ನು ನೋಡಿ ಕಣ್ಣುತುಂಬಿಕೊಂಡು ಹೋಗಿ.
ʻʻಈ ಊರಲ್ಲಿ ನೋಡಲು ಏನೇನೂ ಇಲ್ಲ. ಬರೀ ಡ್ರೈʼʼ ಅಂತ ಫರಮಾನು ಹೊರಡಿಸಬೇಡಿ. ನೋಡುವ ಕಣ್ಣು, ನಡೆಯುವ ಕಾಲು ಇದ್ದವರಿಗೆ ಎಲ್ಲೆಲ್ಲೂ ಸೌಂದರ್ಯವೇ! ಇಲ್ಲಿ ದಕ್ಷಿಣ ಭಾರತದಲ್ಲಿಯೇ ದೊಡ್ಡ ಬುದ್ಧವಿಹಾರ ಇದೆ. ಅದರ ಹೊರಗೆ ಬುದ್ಧನ ಜೀವನ ಕಾಲದ ಕಲಾಕೃತಿಗಳಿವೆ. ನಗರದ ನಟ್ಟ ನಡುವೆ ಬರಗಾಲದಲ್ಲಿ ತಿಂಗಳು ಗಟ್ಟಲೇ ಬಡವರಿಗೆ ಉಣಲು ನೀಡಿದ ಪುಣ್ಯಪುರುಷ ದೊಡ್ಡಪ್ಪ ಅಪ್ಪನ ದೇವಸ್ಥಾನ ಇದೆ. ಅಪ್ಪನ ಕೆರೆ ಇದೆ. ಸಾತ ಗುಂಬಜ್ ಇದೆ. ಕೋಟೆಯಲ್ಲಿ ಅತಿ ದೊಡ್ಡ ಫಿರಂಗಿ ಇರುವ ಗುಂಬಜ್ ಇದೆ. ಚಿಂಚೋಳಿಯ ಗೊಟ್ಟಂಗೊಟ್ಟಿಯಲ್ಲಿ ಸುಂದರ ಜಲಪಾತ ಇದೆ. ನೀವು ಓದಿದ್ದು ಸರಿ. ಗುಲಬರ್ಗಾ ಜಿಲ್ಲೆಯಲ್ಲಿ ವರ್ಷ ಪೂರ್ತಿ ಹರಿಯುವ, ಸುಂದರ ಜಲಪಾತ ಇದೆ. ಸಮೃದ್ಧ ಕಾಡು ಇದೆ. ನಗರದಿಂದ ಸ್ವಲ್ಪದೂರ ಮರತೂರಿನಲ್ಲಿ ಹಿಂದೂ ಆಸ್ತಿ ಕಾಯಿದೆ ಮಿತಾಕ್ಷರದ ಜನಕ ವಿಜ್ಞಾನೇಶ್ವರ ನೆನಪಿನಲ್ಲಿ ಕಟ್ಟಿದ ಸಂಸ್ಥೆ ಇದೆ. ಅಲ್ಲಿಗೆ ಭೇಟಿ ನೀಡಿ. ಅನತಿ ದೂರದ ಸನ್ಮತಿಯಲ್ಲಿ ಬೃಹತ್ ಉತ್ಖನನ ಕಾರ್ಯ ನಡೆಯುತ್ತಿದೆ. ಅಶೋಕನ ಕಾಲದ ಬುದ್ಧ ವಿಗ್ರಹಗಳು, ಶಾಸನಗಳು ಅಲ್ಲಿ ಸಿಕ್ಕಿವೆ. ಅಲ್ಲೊಂದು ಅಪೂರ್ವ ವಸ್ತು ಸಂಗ್ರಹಾಲಯ ಇದೆ. ಇಡೀ ಜಗತ್ತಿನಲ್ಲಿ ಸಾಮ್ರಾಟ್ ಅಶೋಕನ ಚಿತ್ರ ಹಾಗೂ ʻರಾಯೋ ಅಶೋಕೋʼ ಎನ್ನುವ ದೇವನಾಂಪ್ರಿಯ ನ ನಿಜವಾದ ಹೆಸರು ಇರುವುದು ಸನ್ಮತಿ ಯಲ್ಲಿ.
ʻʻಪಾನಿ ಮೆ ನಮಕ ಡಾಲ್ ಔರ ದೇಖ ಉಸೆ. ಪಾನಿ ಮೆ ನಮಕ ಘುಲ್ ಜಾಯೆಗಾ ತೋ ನಮಕ್ ಕಹೇಂ ಕಿಸೆʼʼ (ನೀರಲ್ಲಿ ಉಪ್ಪು ಕರಗಿ ಹೋದಮೇಲೆ ಉಪ್ಪು ಎಂದು ಕರೆಯುವುದಾದರೂ ಯಾವುದನ್ನು) ಎಂದು ಧರ್ಮ ನಿರಪೇಕ್ಷತೆ- ಸಹಬಾಳ್ವೆಯ ನೀತಿ ಪಾಠ ಹೇಳಿದ ಬಡವರ ಬಂಧು ಬಂದೇ ನವಾಜ ಅವರ ದರ್ಗಾ ನಗರದಲ್ಲಿ ಇದೆ. ದರ್ಗಾದ ಎದುರಿಗೆ ಇರುವ ಬೀದಿಯಲ್ಲಿ ಸಿಗುವ ವಿವಿಧ ತಿಂಡಿ ತಿನಿಸುಗಳು ಗಾಂಧಿ ಬಜಾರ್ ನ ಶೆಟ್ಟರ ಬೀದಿಯ ತಿಂಡಿಗಿಂತ ಭಿನ್ನವಾಗಿರುತ್ತವೆ. ನೀವು ತಿಂದಿರದೇ ಇರುವ ಟರ್ಕಿಷ ಬೇಕರಿ ವಸ್ತುಗಳು ಇಲ್ಲಿ ಇರುತ್ತವೆ. ಶೀರ್ಮಾಲ್, ಶೀರ ಕೂರ್ಮಾ, ಓಸ್ಮಾನಿಯಾ ಬಿಸ್ಕುಟ್, ಸೆಹರಿ, ತಹರಿ, ಸಮೂಸಾ, ಇರಾನಿ ಚಹಾ, ಶಾಹಿ ಸ್ವೀಟು, ಅಕರೂಟ್ ಹಲ್ವಾ, ಬಿರಿಯಾನಿ, ಹಲೀಮ, ಹರೀಸ ಮುಂತಾದವುಗಳ ಸ್ವಾದ ವನ್ನು ಬಲ್ಲವರೇ ಬಲ್ಲರು. ಹೊಸ ಬಸ್ ಸ್ಟ್ಯಾಂಡಿನ ಎದುರಿಗೆ ಥೈಲಾ ಬಂಡಿಯ ಸೂಸಲಾ ಮಿರ್ಚಿ, ಓಲ್ಗಾ ಬಟ್ಟೆ ಅಂಗಡಿ ಎದುರಿಗೆ ಸಿಗುವ ಬೆಣ್ಣೆ ಲಸ್ಸಿಯ ಸ್ವಾದ ನಿಮ್ಮನ್ನು ವರ್ಷಾನುಗಟ್ಟಲೇ ಕಾಡದೇ ಬಿಡದು.
ಗುಲಬರ್ಗಾದಿಂದ ಸ್ವಲ್ಪ ದೂರ ಬೆಂಡೆ ಬೊಂಬಳಿಯ ಸಾಂಪ್ರದಾಯಿಕ ಶೈಲಿಯ ಕಟ್ಟಡಗಳು ಬೆರಗು ಹುಟ್ಟಿಸುತ್ತವೆ. ಎಕರೆ ಗಟ್ಟಲೇ ಜಾಗದಲ್ಲಿ ಕಟ್ಟಿದ ಇಲ್ಲಿನ ಬಹುಮಹಡಿ ಮಣ್ಣಿನ ಮನೆಗಳು ನೈಸರ್ಗಿಕವಾಗಿ ವಾತಾನುಕೂಲಿತವಾಗಿರುವವು. ಕರೆಂಟ್ ಇಲ್ಲದೇ ಎಸಿ ಅನುಭವ ಕೊಡುವವು. ಇವನ್ನು ಜಪಾನು, ಯುರೋಪು ಹಾಗೂ ಅಮೇರಿಕೆ ದೇಶದ ವಿಧ್ವಾಂಸರು ಅಧ್ಯಯನ ಮಾಡಿದ್ದಾರೆ. ಕರ್ನಾಟಕದ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜುಗಳಿಗೆ ಅವಿನ್ನೂ ಕಂಡಿಲ್ಲ.
ಇನ್ನೂ ಗುಲಬರ್ಗಾ- ರಾಯಚೂರು ಗಡಿಯಲ್ಲಿ ಗೂಗಲ್ ಎಂಬ ವಿಶೇಷ ಹೆಸರಿನ ಒಂದು ಊರು ಇದೆ. ಅಲ್ಲಿ ಹೋಗಿ ಅಲ್ಲಿನ ಮೈಲುಗಲ್ಲಿನ ಹತ್ತಿರ, ಅಲ್ಲಿನ ಜಲಾಶಯ ಗೂಗಲ್ ಡ್ಯಾಮ್ ನ ಹತ್ತಿರ ಸೆಲ್ಫಿ ತೆಗೆದುಕೊಂಡು ಫೇಸುಬುಕ್ಕು- ಇನಸ್ಟಾಗ್ರಾಮಿನಲ್ಲಿ ಹಾಕಿ, ನಿಮ್ಮ ಸ್ನೇಹಿತರಿಗೆ ಹೊಟ್ಟೆ ಉರಿಸಿ.
ಇಲ್ಲಿನ ಸಾಹಿತ್ಯದ ಬಗ್ಗೆ, ಪರಿಷತ್ತಿನ ಬಗ್ಗೆ, ಹೈದರಾಬಾದು – ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಬರೆಯದೇ ಬರೀ ಗುಲಬರ್ಗದ ʻಬ್ಯಾಕ್ ವರ್ಡ್ ಏರಿಯಾʼ ಬಗ್ಗೆ ವರದಿ ಮಾಡಬೇಡಿ. ಅದಕ್ಕೆ ಆಮೇಲೆ ಬರುವಿರಂತೆ. ಸ್ವಲ್ಪ ಸಂಶೋಧನೆ ಮಾಡಿ ಬರೆಯುವಿರಂತೆ.
ಅಂದಹಾಗೆ ರಾಜ್ಯ ಸರಕಾರದ ಅನುದಾನ ಇನ್ನೂ ವರೆಗೂ ಬಾರದೇ ನಡೆಸಲಾಗುತ್ತಿರುವ ಮೊದಲನೇ ಸಮ್ಮೇಳನ ಇದು. ಇದು ಐತಿಹಾಸಿಕ ದಾಖಲೆ. ಅಂದ ಹಾಗೆ ಇಲ್ಲಿಯವರೆಗೂ ಮಂಗಳೂರಿನಿಂದ ಒಬ್ಬನೇ ಒಬ್ಬ ಸಾಹಿತ್ಯಾಸಕ್ತ ಗುಲಬರ್ಗಾ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಲ್ಲವಂತೆ. ಅದೂ ಒಂದು ದಾಖಲೆ ಆದೀತು.
ಇಂಗ್ಲೀಷು ಪತ್ರಿಕೆಯ ಸಂಪಾದಕರೊಬ್ಬರು ʻʻಬ್ಯಾಂಗಲೋರ್ ಇಸ್ ದ ಸೆಂಟರ್ ಆಫ್ ದಿ ಯುನಿವರ್ಸ್ʼʼ ಅಂತ ಪದೇ ಪದೇ ಹೇಳುತ್ತಿದ್ದರಂತೆ. ಅವರು ಪ್ರಾಥಮಿಕ ಶಾಲೆಯಲ್ಲಿ ಭೂಗೋಳ ತರಗತಿಗೆ ಚಕ್ಕರು ಹೊಡೆದಿದ್ದರು. ಅವರು ತಪ್ಪಿಸಿದ ಕ್ಲಾಸಿನಲ್ಲಿ ಅವರ ಶಿಕ್ಷಕರು ಕೋಪರನಿಕಸ್ ಹಾಗೂ ಗೆಲಿಲಿಯೊರ ಬಗ್ಗೆ ಹೇಳಿದ್ದರು.
ಆಗ ಶಿಕ್ಷಕರು ಹೇಳಿದ್ದೇನೆಂದರೆ ಪ್ರತಿಯೊಬ್ಬರಿಗೂ ತಮ್ಮ -ತಮ್ಮ ಊರೇ ವಿಶ್ವದ ಕೇಂದ್ರಸ್ಥಾನ.
ಇದು ನಮ್ಮೆಲ್ಲರಿಗೂ ಗೊತ್ತಿರಲಿ. ..
ಆಗ ಶಿಕ್ಷಕರು ಹೇಳಿದ್ದೇನೆಂದರೆ ಪ್ರತಿಯೊಬ್ಬರಿಗೂ ತಮ್ಮ -ತಮ್ಮ ಊರೇ ವಿಶ್ವದ ಕೇಂದ್ರಸ್ಥಾನ.
ಇದು ನಮ್ಮೆಲ್ಲರಿಗೂ ಗೊತ್ತಿರಲಿ. ..
—-
0 Comments